KSET 2025: ನಾಳೆಯಿಂದ ಅರ್ಹ ಶೇ.6ರಷ್ಟು ಅಭ್ಯರ್ಥಿಗಳ ದಾಖಲೆ ಪರಿಶೀಲನೆ: ಸಮಯ-ವೇಳಾಪಟ್ಟಿ ನೋಡಿ
ಬೆಂಗಳೂರು, ನವೆಂಬರ್ 28: "ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ' (KSET Exam 2025) ಬರೆದು ಅರ್ಹರಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ. ಈ ಸಂಬಂಧ ಆಯಾ ವಿಷಯಗಳ ಅಭ್ಯರ್ಥಿಗಳಿಗೆ ದಿನಾಂಕ, ಸಮಯ ಮತ್ತು ವೇಳಾಪಟ್ಟಿ ಗಮನಿಸಿ ದಾಖಲೆ ಪರಿಶೀಲನೆಗೆ ಕೆಇಎ ಕಚೇರಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
KSET 2025ರ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯು ಇದೇ ನವೆಂಬರ್ 29ರಿಂದ ಡಿಸೆಂಬರ್ 6ರ ವರೆಗೆ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳ ಪರಿಶೀಲನೆಗೆ ಬರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯೆರ್ಥಿಗಳ ದಾಖಲೆ ಪರಿಶೀಲನೆ ಡಿಸೆಂಬರ್ 8 ಮತ್ತು 9 ರಂದು ನಡೆಸಲಾಗುತ್ತದೆ. ಆ ದಿನಗಳಂದು ಪರಿಶಿಷ್ಟ ಜಾತಿಯ ಎ, ಬಿ, ಸಿ ಪ್ರವರ್ಗಗಳ ಅಭ್ಯರ್ಥಿಗಳು ಕೂಡ ಮೂಲ ದಾಖಲೆ ಸಮೇತ ಬರಬಹುದು. ಸದರಿ ಕೆಸೆಟ್ ಪರೀಕ್ಷೆಯಲ್ಲಿ ಶೇಕಡಾ 06ರಷ್ಟು ಅಭ್ಯರ್ಥಿಗಳು ಮಾತ್ರವೇ ಆಯ್ಕೆ ಆಗಿದ್ದು, ಅವರಿಗೆ ಈ ದಾಖಲಾತಿ ಪರಿಶೀಲನೆ ಅನ್ವಯಿಸುತ್ತದೆ.
ಶೈಕ್ಷಣಿಕ ಮೂಲ ದಾಖಲೆಗಳ ಜತೆಗೆ ಕ್ಲೇಮ್ ಮಾಡಿರುವುದಕ್ಕೆ ಪೂರಕವಾದ ಮೂಲ ದಾಖಲೆಗಳ ಸಮೇತ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸ್ನಾತಕೋತ್ತರ ಪದವಿ ಅಪೂರ್ಣ ಆಗಿರುವವರು ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ ಎಂದು ಪ್ರಾಧಿಕಾರವು ತಿಳಿಸಿದೆ. ಅಭ್ಯರ್ಥಿಗಳು ಹೆಚ್ಚಿನ ಮತ್ತು ವೇಳಾಪಟ್ಟಿ ಸಲುವಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 20251127202802_mergedkannada.pdf https://share.google/3vNxH8gTBGHg96c0X ಲಿಂಕ್ ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಸೆಟ್ 2025 ಪರೀಕ್ಷೆ ಕುರಿತು...
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ಅರ್ಹತಾ ಪರೀಕ್ಷೆಗೆ ಪ್ರಾಧಿಕಾರವು ದಿನಾಂಕ 22.08.2025 ರಂದು ಅಧಿಸೂಚನೆ ಹೊರಡಿಸಿತ್ತು. 24.09.2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 1,34,826 ಮಂದಿ ಅರ್ಜಿ ಸಲ್ಲಿಸಿದವರ ಪೈಕಿ 1,21,052 ಮಂದಿ ಮಾತ್ರವೇ ಪರೀಕ್ಷೆ ಬರೆದಿದ್ದರು.
ನವೆಂಬರ್ 02 ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 ನಡೆಸಲಾಯಿತು. ಅಭ್ಯರ್ಥಿಗಳ ಮಾಹಿತಿಗಾಗಿ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ವರದಿಯನ್ನು ಆಧಾರಿಸಿ ಅಂತಿಮ ಕೀ ಉತ್ತರಗಳನ್ನು ಮತ್ತು ತಾತ್ಕಾಲಿಕ ಅಂಕಪಟ್ಟಿ 15.11.2025 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (https://cetonline.karnataka.gov.in/kea/indexnew) ಪ್ರಕಟಿಸಲಾಗಿದೆ.
ಅಭ್ಯರ್ಥಿಗಳ ಅಂಕಗಳು ಮತ್ತು ಮೀಸಲಾತಿಯನ್ವಯ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಕೆಸೆಟ್-2025 ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಧರಿಸಿ ಮೂಲ ದಾಖಲೆಗಳ ಪರಿಶೀಲನೆಯ ವೇಳಾ ಪಟ್ಟಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ವಿಷಯವಾರು ಪಟ್ಟಿಯಲ್ಲಿರುವ ಅನುಕ್ರಮ ಸಂಖ್ಯೆಯನ್ನು ಆಧರಿಸಿ ನಿಗದಿತ ದಿನಾಂಕ ಮತ್ತು ಸಮಯದಂದು ಅವಶ್ಯಕ ದಾಖಲೆಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ಸೂಚಿಸಲಾಗಿದೆ.












Click it and Unblock the Notifications