KSDL: ಉತ್ತರ ಕರ್ನಾಟಕದಲ್ಲಿ ಸಾಬೂನು ಉತ್ಪಾದನಾ ಘಟಕ; ಸರ್ಕಾರ ಅನುಮೋದನೆ

ಬೆಂಗಳೂರು: ಸರ್ಕಾರಿ ಅಧೀನದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಇತ್ತೀಚೆಗಷ್ಟ ಸಾರ್ವಕಾಲಿಕ ದಾಖಲೆ ವಹಿವಾಟು ನಡೆಸಿತ್ತು. ಅದರ ಬೆನ್ನಲ್ಲೆ ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಹೆಮ್ಮೆಯ KSDL ಉತ್ಪಾದನಾ ಘಟಕವನ್ನು ವಿಜಯಪುರದಲ್ಲಿ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಈ ಮಾಹಿತಿ ನೀಡಿದ್ದಾರೆ. ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು.

KSDL

ಘಟಕ ಸ್ಥಾಪನೆಗೆ ಅನುಮೋದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿ ಸಚಿವರು ಮಾತನಾಡಿದರು. 'ಪಾರಂಪರಿಕ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಒಟ್ಟು 94 ಬಗೆಬಗೆಯ ಗುಣಮಟ್ಟದ ಉತ್ಪನ್ನಗಳನ್ನು ಸಂಸ್ಥೆ ಹೊಂದಿದೆ. ಉತ್ಪನ್ನಗಳಿಗೆ ಉತ್ತರ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಪಾರ ಬೇಡಿಕೆ ಇದೆ.

50 ಎಕರೆಯಲ್ಲಿ ಸಾಬೂನು ಕಾರ್ಖಾನೆ

ಸದ್ಯ ವಿಜಯಪುರದ ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ 50 ಎಕರೆ ಜಾಗದಲ್ಲಿ ಸಾಬೂನು ಕಾರ್ಖಾನೆಯ ನೂತನ ಉತ್ಪಾದನಾ ಘಟಕ ಆರಂಭಿಸಲಾಗುವುದು. ಇದರಿಂದ ಆ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ಉದ್ಯೋಗಸೃಷ್ಟಿ ಮತ್ತು ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗಲಿದೆ ಎಂದರು.

ಘಟಕ ಸ್ಥಾಪನೆಯ ಅಂದಾಜು ವೆಚ್ಚ, ವಿವರ

227.91 ಕೋಟಿ ರೂ.ಗಳಲ್ಲಿ ಭೂಮಿ ಖರೀದಿಗೆ 30 ಕೋಟಿ ರೂ, ಉತ್ಪಾದನಾ ಸ್ಥಾವರ ನಿರ್ಮಾಣಕ್ಕೆ 77.88 ಕೋಟಿ ರೂ, ಮೂಲಸೌಕರ್ಯ ವ್ಯವಸ್ಥೆಗೆ 24 ಕೋಟಿ ರೂ, ಯಂತ್ರೋಪಕರಣಗಳ ಖರೀದಿಗೆ 70.80 ಕೋಟಿ ರೂ, ಟೆಂಡರ್ ಪ್ರೀಮಿಯಂಗೆ 8.63 ಕೋಟಿ ರೂ, ಸಾದಿಲ್ವಾರು ವೆಚ್ಚಕ್ಕೆ 8.63 ಕೋಟಿ ರೂ, ಮತ್ತು ಇತರೆ ವೆಚ್ಚಗಳಿಗೆಂದು 7.97 ಕೋಟಿ ರೂ ಮೀಸಲಿಡಲಾಗಿದೆ. ಇಲ್ಲಿ ಎಕರೆಗೆ 59.30 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಉತ್ತರ ಕರ್ನಾಟಕಕ್ಕೂ ಬಂತು ಕೆಎಸ್‌ಡಿಎಲ್

ಉತ್ತರ ಕರ್ನಾಟಕ ಭಾಗದಲ್ಲಿ ಕೆ.ಎಸ್.ಡಿ.ಎಲ್.ನ ಒಂದು ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಚಿಂತನೆ ಕಳೆದ ಒಂದು ವರ್ಷದಿಂದಲೂ ಇತ್ತು. 110 ವರ್ಷಗಳ ಇತಿಹಾಸವಿರುವ ಕಾರ್ಖಾನೆಯು ಇದೇ ಮೊದಲ ಬಾರಿಗೆ 2025-26ರಲ್ಲಿ 47,494 ಟನ್ ಉತ್ಪಾದನೆ ಮತ್ತು 2,016 ಕೋಟಿ ರೂ.ಗಳ ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿದ್ದು, 507 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ನೂತನ ಘಟಕದ ಆರಂಭವು ಸಂಸ್ಥೆಗೆ ಮತ್ತಷ್ಟು ಬಲ ತರಲಿದೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಉತ್ಕರ್ಷಕ್ಕೆ ಕಳೆದ ಮೂರು ವರ್ಷಗಳಿಂದ ಬ್ರ್ಯಾಂಡಿಂಗ್, ಪ್ರಚಾರ, ಮಾರುಕಟ್ಟೆ, ಗುಣಮಟ್ಟ ನಿರ್ವಹಣೆ, ರಫ್ತು ವಹಿವಾಟು, ಇ-ಕಾಮರ್ಸ್ ಸೇರಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಾಟೀಲ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+