₹1,34,87,45,862 ಲಾಭ: ಸರ್ಕಾರಕ್ಕೆ ಚೆಕ್ ಹಸ್ತಾಂತರಿಸಿದ ಕೆಎಸ್‌ಡಿಎಲ್
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್‌ಡಿಎಲ್) ಭರ್ಜರಿ ಲಾಭದ ಹಾದಿಯಲ್ಲಿ ಸಾಗಿದೆ. ಈ ಹಿನ್ನೆಲೆ 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳ ಚೆಕ್ ಅನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂಪಾಯಿ ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 66ನೇ ಸಭೆ ಹಾಗೂ ಬಂಡವಾಳ ಹೂಡಿಕೆ ಉತ್ತೇಜನಕ್ಕೆ ಸಮಗ್ರ ಏಕಗವಾಕ್ಷಿ ವ್ಯವಸ್ಥೆ ಮತ್ತು ವ್ಯಾಪಾರ ಒಪ್ಪಿಗೆ ನೀಡಿಕೆ ವ್ಯವಸ್ಥೆಯ ಸರಳೀಕರಣ ಕುರಿತ ಸಭೆಯ ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡ ಅವರು ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ನೀಡಿದರು.

27 ಕೋಟಿ ಲಾಭಾಂಶ ಹೆಚ್ಚಳ
2022-23ರಲ್ಲಿ ಬಿಜೆಪಿ ಸರಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾಡಿನ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ನಮ್ಮ ಸರ್ಕಾರದ ಅದ್ವಿತೀಯ ಸುಧಾರಣಾ ಕ್ರಮಗಳಿಂದಾಗಿ ಮತ್ತೊಂದು ಐತಿಹಾಸಿಕ ಸಾಧನೆ ಮೆರೆದಿದೆ. ಈ ದಿನ ಕೆಎಸ್‌ಡಿಎಲ್ ಲಾಭಾಂಶದ ₹1,34,87,45,862-00 ಕೋಟಿಯ ಚೆಕ್ ಅನ್ನು ಸಿಎಂಗೆ ಹಸ್ತಾಂತರಿಸಲಾಯಿತು. ಇದು ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5 ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು ಎಂದು ಸಚಿವ ಎಂಬಿ ಪಾಟೀಲ್ ವಿವರಿಸಿದ್ದಾರೆ.
ಈ ವೇಳೆ ಸಚಿವರಾದ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ.ಸುಧಾಕರ, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್ ಉಪಸ್ಥಿತರಿದ್ದರು.












Click it and Unblock the Notifications