KRS Dam: '92 ವರ್ಷಗಳಲ್ಲಿಯೇ ಸತತ 156 ದಿನ ತುಂಬಿದ್ದ ಕೆಆರ್ ಎಸ್ ಡ್ಯಾಂ'
ಮಂಡ್ಯ,ಜನವರಿ 08: ಕೆಆರ್ ಎಸ್ ನಿರ್ಮಾಣವಾದ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 156 ದಿನಗಳು 124.48 ಅಡಿ ನೀರಿನ ಲಭ್ಯತೆ ಹೊಂದಿದೆ ಎಂದು ಕೃಷಿ ಹಾಗೂ ನೀರಾವರಿ ಸಚಿವ ಎನ್ ಚಲುವರಾಯಸ್ವಾಮಿ ಸಂತಸವನ್ನ ವ್ಯಕ್ತಪಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ನಲ್ಲಿ ನಡೆದ ಐಸಿಸಿ ಸಭೆ ನಂತರ ಸಚಿವ ಚಲುವರಾಯಸ್ವಾಮಿ ಅವರು ಮಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕಾಲ್ಗುಣ ಸರಿಯಿಲ್ಲ ಎಂದು ಟೀಕೆ ಮಾಡುತ್ತಿದ್ದರು. ನಮ್ಮದೇ ಸರ್ಕಾರದಲ್ಲಿ ಕೆಆರ್ ಎಸ್ ತನ್ನ ಭಾಗ್ಯ ತೋರಿದೆ. ಕಳೆದ ಆರು ತಿಂಗಳು ನಾಲೆಗಳಿಗೆ ನೀರು ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಕ್ಕಿಂತ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದಾಗಿಯೂ ಜಲಾಶಯ ಸಂಪೂರ್ಣ ಭರ್ತಿ ಇದ್ದು 124.30 ಅಡಿ ಪ್ರಸ್ತುತ ನೀರಿನ ಮಟ್ಟ ಇದೆ ಎಂದು ಹೇಳಿದರು.

ಐಸಿಸಿ ಸಭೆಯಲ್ಲಿ ಶಾಸಕರ, ಅಧಿಕಾರಿಗಳ ಅಭಿಪ್ರಾಯ ತೆಗೆದುಕೊಂಡು ಜನವರಿ 10ರಿಂದ ಕಟ್ಟು ಪದ್ದತಿಯಂತೆ ನೀರು ಬಿಡಲು ನಿರ್ಧಾರಿಸಲಾಗಿದೆ. ನಾಲ್ಕು ಕಟ್ಟು ನೀರು ಬಿಡಲಾಗುವುದು. ಅದಷ್ಟೂ ಬೇಗ ರೈತರು ನಾಟಿ ಮಾಡಲು ಮುಂದಾಗುವಂತೆ ಸಲಹೆ ನೀಡಿದರು. 18 ದಿನಗಳು ನೀರು ಹರಿಸಲಾಗುವುದು. 12 ದಿನಗಳು ನಿಲ್ಲಿಸಲಾಗುವುದು. ನಾಲೆಯ ಪ್ರಾರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿಲ್ಲ ಅಲ್ಪಾವಧಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈಗ ಮುಖ್ಯ ನಾಲೆಗಳ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ನಾಲೆಗಳ ದುರಸ್ಥಿಗೆ ಅವಕಾಶವಿದೆ. ಆದ್ಯತೆ ಮೇರೆಗೆ ನಾಲಾ ಕೆಲಸ ಮಾಡಲಾಗುವುದು ಎಂದ ಅವರು ಜೂನ್ ಅಂತ್ಯದವರೆಗೂ ಕುಡಿಯಲು ಹಾಗೂ ಬೆಳೆಗಳಿಗೆ ಸಾಕಾಗಲಿದೆ. ಜಿಲ್ಲೆಯ ನಾಲೆಗಳ ಆಧಾರಿತ ಶೇ 100 ರಷ್ಟು ಕೆರೆಗಳು ತುಂಬಿವೆ ಎಂದು ಕೃಷಿ ಹಾಗೂ ನೀರಾವರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಇನ್ನೂ ರಾಜ್ಯ ರಾಜಕೀಯದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಗಾಗಲೇ ಮಾತನಾಡಿದ್ದಾರೆ. ಊಟಕ್ಕೆ ಕರೆಯುವುದು ರಾಜಕಾರಣವಲ್ಲ. ಸಮುದಾಯ ಸಂಘಟನೆ ಮಾಡುವುದು ಪಕ್ಷಕ್ಕೆ ಒಳ್ಳೆಯದು. ತಪ್ಪೇನಿದೆ ಎಂದು ಪ್ರಶ್ನಿಸಿದರು.
ನಮ್ಮ ಬ್ರದರ್ ಗೆ ನಮ್ಮ ಸರ್ಕಾರ ನೋಡಲು ಆಗುತ್ತಿಲ್ಲ ಸರ್ಕಾರ ರಚನೆಯಾದ ನಂತರ ನಮ್ಮ ಬ್ರದರ್ ಸಂಕಟ ಪಡುತ್ತಿದ್ದಾರೆ. ಅವರಿಗೆ ಯಾರಾದರೂ ಸಮಾಧಾನ ಹೇಳುವವರು ಇದ್ದರೇ ಹೇಳಿ ಎಂದು ವ್ಯಂಗ್ಯವಾಡಿದರು.
ಸರ್ಕಾರ ಬೀಳುತ್ತೆ, ತೆಗೆಯುತ್ತೇವೆ ಎನ್ನುವುದು ಒಳ್ಳೆಯದಲ್ಲ. ಇನ್ನು ಮೂರುವರೆ ವರ್ಷ ಸರ್ಕಾರ ಇದೇ ರೀತಿ ಇರುತ್ತದೆ. ನಮ್ಮನ್ನು ನೋಡಿ ಅವರಿಗೆ ಸಂಕಟ ಬರುತ್ತದೆ. ಇದಕ್ಕೆ ನಮ್ಮ ಬಳಿ ಮೆಡಿಸಿನ್ ಇಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಬ್ರದರ್ ವಿರುದ್ಧ ನಾವು ಯಾವತ್ತು ಮಾತನಾಡಿಲ್ಲ. ಅವರು ಸಿಎಂ ಆದಾಗಲೂ ಅವರ ವಿರುದ್ದ ಮಾತನಾಡಿಲ್ಲ. ಆದರೆ ನಮ್ಮನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಇನ್ನೋಬ್ಬರನ್ನ ನೋಡಿ ಅಸೂಯೆ ಪಡಬಾರದು. ನಾನು ಎಂದಿಗೂ ಅವರನ್ನ ನನ್ನ ಸ್ನೇಹಿತ, ಬ್ರದರ್ ಅಂತಾನೇ ಹೇಳುತ್ತೇನೆ ಎಂದು ಮರ್ಮಿಕವಾಗಿ ನುಡಿದರು. ರಾಜ್ಯದಲ್ಲಿ ಸಿಎಂ ಆದವರೂ ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲ. ಚನ್ನಪಟ್ಟಣ ಉಪಚುನಾವಣೆ ಮಗನ ಪರ ಓಟ್ ಕೇಳಲಿಲ್ಲ. ಬರಿ ಸರ್ಕಾರದ ವಿರುದ್ಧ ಮಾತನಾಡಿದರು. ಈಗಲೂ ಚನ್ನಪಟ್ಟಣದಲ್ಲಿ ಇದನ್ನ ಅವರ ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ನರೇಂದ್ರಸ್ವಾಮಿ ಅವರನ್ನ ಸಚಿವರಾಗಿ ಮಾಡಲಿ ಎಂದು ಜಿಲ್ಲೆಯ ಆರು ಶಾಸಕರ ಬಯಕೆ, ಆಶಯವು ಆಗಿದೆ. ಆದರೆ ಸಚಿವ ಸ್ಥಾನ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಉತ್ತರ ನೀಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮುಂದೆ ತೀರ್ಮಾನ ಮಾಡುವವರೆಗೂ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿದ್ದು, ಮುಂದೆ ಎಐಸಿಸಿ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕಿದೆ ಎಂದರು.
ಒಕ್ಕಲಿಗರ ಸಂಘಟನೆ ಬಗ್ಗೆ ಕೇಳಿದಾಗ, ನಾವು ಸಂಘಟನೆ ಮಾಡುವ ಅವಶ್ಯಕತೆ ಬಂದಾದ ಮಾಡುತ್ತೇವೆ. ಎಲ್ಲಾ ಸಮಾದಾಯದವರು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು. ಈ ವೇಳೆ ಶಾಸಕರಾದ ರಮೇಶ್ ಬಾಬು ಬಂದಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಸೇರಿದಂತೆ ಕೆಆರ್ ಎಸ್ ಅಧಿಕಾರಿಗಳು ಇದ್ದರು.












Click it and Unblock the Notifications