ಕೆಪಿಎಸ್‌ಸಿ ಹಗರಣ : ಎಚ್ಡಿಕೆ ನೀಡಿದ ದಾಖಲೆಗಳೇನು?

ಬೆಂಗಳೂರು, ಆ.12 : ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಪ್ರಕರಣದ ಮಾತಿನ ಸಮರ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಎಸ್‌ಸಿ ಸದಸ್ಯರಿಗೆ ದೂರವಾಣಿ ಕರೆ ಮಾಡಿರುವ ವಿಚಾರ­ವನ್ನು ಎಚ್‌.ಡಿ.ಕುಮಾರ­ಸ್ವಾಮಿ ಬಹಿರಂಗಪಡಿಸಿದ್ದರೆ, ಕುಮಾರಸ್ವಾಮಿ ಅವರ ಕುಟುಂಬದವರು ಕೆಪಿಎಸ್‌ಸಿ ಸದಸ್ಯರಿಗೆ ಯಾವತ್ತೂ ಕರೆ ಮಾಡಿಯೇ ಇಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೋಮವಾರ ವಿಧಾನ­ಸೌಧ­ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು, ದೂರವಾಣಿ ಕರೆಗಳ ದಾಖಲೆಯನ್ನು ಬಿಡುಗಡೆ ಮಾಡಿದರು. 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿ­ಕಾರಿ­ಗಳ ಆಯ್ಕೆಗೆ ಸಂದರ್ಶನ ನಡೆಯುವ ಸಂದರ್ಭ­ದಲ್ಲಿ ಸಿದ್ದರಾಮಯ್ಯ ಅವರು ಬಹುತೇಕ ಎಲ್ಲ ಸದಸ್ಯ­ರಿಗೂ ದೂರವಾಣಿ ಮೂಲಕ ಮಾತನಾಡಿ­ದ್ದಾರೆ ಎಂದು ಆರೋಪಿಸಿದರು. [ಕೆಪಿಎಸ್ಸಿ ನೇಮಕಾತಿ : ಸರ್ಕಾರಕ್ಕೆ ಎಚ್ಡಿಕೆ 12 ಪ್ರಶ್ನೆಗಳು]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ನಡೆಯುವ ನೇಮಕಾತಿ ಸಂದರ್ಭ­ದಲ್ಲಿ ತಮಗೆ ಬೇಕಾದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕೊಡಿಸಲು ಪ್ರಯತ್ನಿಸಿದ್ದರು. ಈ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಕುಮಾರಸ್ವಾಮಿ ಆರೋಪಗಳು ಇಲ್ಲಿವೆ.

ತಿರಸ್ಕರಿಸುವ ಅಧಿಕಾರ ಇಲ್ಲ

ತಿರಸ್ಕರಿಸುವ ಅಧಿಕಾರ ಇಲ್ಲ

ನಿಯಮದ ಪ್ರಕಾರ ಕೆಪಿಎಸ್‌ಸಿ ಕಳು­ಹಿ­ಸುವ ಆಯ್ಕೆ ಪಟ್ಟಿಯನ್ನು ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕಾಗಲಿ ಅಥವಾ ಸಚಿವ ಸಂಪುಟಕ್ಕಾಗಲಿ ಇಲ್ಲ. ತಿರಸ್ಕರಿಸಲೇ ಬೇಕಿದ್ದರೆ ಆ ಕೆಲಸವನ್ನು ಶಾಸನಸಭೆ ಮಾಡಬೇಕು. ಆದರೆ, ಹೇಗೆ ಸಚಿವ ಸಂಪುಟ ಸಭೆಯಲ್ಲಿ ಪಟ್ಟಿಯನ್ನು ರದ್ದುಗೊಳಿಸಲಾಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೈತ್ರಿ ಅವರು ಕರೆ ಮಾಡಿದ್ದು ಏಕೆ?

ಮೈತ್ರಿ ಅವರು ಕರೆ ಮಾಡಿದ್ದು ಏಕೆ?

ಕೆಪಿಎಸ್‌ಸಿ ಹಗರಣ ಬಯಲಿಗೆ ಎಳೆದಿರುವ ಡಾ.ಮೈತ್ರಿ ಅವರು ಸಹ ಕೆಪಿಎಸ್‌ಸಿ ಸದಸ್ಯರಾಗಿದ್ದ ಮಂಗಳಾ ಶ್ರೀಧರ್‌ ಅವರ ಆಪ್ತ ಸಹಾಯಕ ಅಶೋಕ ಕುಮಾರ್‌ ಅವರಿಗೆ 17 ಬಾರಿ ದೂರವಾಣಿ ಕರೆ ಮಾಡಿ­ದ್ದಾರೆ. ಅಲ್ಲದೆ, ಮಂಗಳಾ ಅವರ ತಂದೆ ಮುನಿ­ಯಪ್ಪನವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ­ದ್ದಾರೆ. ಇದರ ಹಿಂದಿನ ಉದ್ದೇಶವೇನು? ಎಂದು ಸಿಐಡಿ ಏಕೆ ತನಿಖೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಎಜಿಗೆ ದೂರು ನೀಡಿದ್ದೇಕೆ?

ಎಜಿಗೆ ದೂರು ನೀಡಿದ್ದೇಕೆ?

ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅಥವಾ ಪೊಲೀಸರಿಗೆ ದೂರು ನೀಡದೆ ಡಾ.ಮೈತ್ರಿ ಅವರು ಅಡ್ವೊ­ಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಅವರಿಗೆ ದೂರು ನೀಡಲು ಕಾರಣವೇನು? ಟೈಪ್‌ ಮಾಡಿದ ದೂರನ್ನು ಪುನಃ ಕೈಯಲ್ಲಿ ಬರೆಸಿದ್ದು ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದೊಂದು ವ್ಯವಸ್ಥಿತ ಸಂಚು

ಇದೊಂದು ವ್ಯವಸ್ಥಿತ ಸಂಚು

2011ನೇ ಸಾಲಿನ ನೇಮಕಾತಿ­ಯನ್ನು ರದ್ದುಪಡಿ­ಸಿರುವುದು ಒಂದು ವ್ಯವಸ್ಥಿತ ಸಂಚು ಎಂದ ಆರೋಪಿಸಿರುವ ಕುಮಾರಸ್ವಾಮಿ, ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ, ಸಂದ­ರ್ಶನ ನಡೆಸುವುದಕ್ಕೆ ಅಡ್ಡಿ ಇಲ್ಲ ಎಂದು ಚುನಾ­ವಣಾ ಆಯೋಗ ತಿಳಿಸಿದ್ದರೂ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಅವರು ಕೆಪಿ­ಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು, ಸಂದರ್ಶನ ನಿಲ್ಲಿಸುವಂತೆ ಸೂಚಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೆಂಪಯ್ಯ ಅವರಿಂದ ಒತ್ತಡ

ಕೆಂಪಯ್ಯ ಅವರಿಂದ ಒತ್ತಡ

ಗೃಹ ಸಚಿವರ ಭದ್ರತಾ ಸಲಹೆಗಾರರಾದ ಕೆಂಪಯ್ಯ ತಮ್ಮ ಸಂಬಂಧಿಕರನ್ನು ಡಿವೈಎಸ್ಪಿ ಮಾಡಲು ಪ್ರಯತ್ನ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ. ಅವರ ಬದಲಿಗೆ, ಸೋಲಿಗ ಜಾತಿಯ ರವಿರಾಮಯ್ಯ ಅವರನ್ನು ಡಿವೈಎಸ್ಪಿ ಹುದ್ದೆಗೆ ನೇಮಕ ಮಾಡಿದ್ದು ಕೂಡ ಪಟ್ಟಿ ತಿರಸ್ಕಾರ ಆಗಲು ಪ್ರಮುಖ ಕಾರಣ ಎಂದು ಕುಮಾರಸ್ವಾಮಿ ದೂರಿದ್ದಾರೆ.

ಯಡಿಯೂರಪ್ಪ ಹೆಸರು ತಂದ ಎಚ್ಡಿಕೆ

ಯಡಿಯೂರಪ್ಪ ಹೆಸರು ತಂದ ಎಚ್ಡಿಕೆ

ಕರ್ನಾಟಕ ಲೋಕಸೇವಾ ಆಯೋಗದ ಹಾಳಾಗುವಲ್ಲಿ ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೊಡುಗೆಯೂ ಇದೆ ಎಂದು ಕುಮಾರಸ್ವಾಮಿ ದೂರಿದ್ದಾರೆ. ತಮ್ಮ ವಿರುದ್ಧ ಬಂದ ಆಪಾದನೆಗಳಿಗೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ ಅವರೇ ಕಾರಣ ಎಂದು ಅವರ ವಿರುದ್ಧ ತನಿಖೆ ಮಾಡಿಸಿದ ಯಡಿಯೂರಪ್ಪ ಅವರು, ಕೃಷ್ಣ ಅವರನ್ನು ಜೈಲಿಗೆ ಕಳುಹಿಸಿದರು ಎಂದು ಆರೋಪಿಸಿದರು.

ಕುಮಾರಸ್ವಾಮಿ ಸುಳ್ಳುಗಾರ

ಕುಮಾರಸ್ವಾಮಿ ಸುಳ್ಳುಗಾರ

ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಜಗತ್ತಿನ ದೊಡ್ಡ ಸುಳ್ಳುಗಾರ ಟೀಕಿಸಿದ್ದಾರೆ. ನಾನು ಹಣ ಪಡೆದು ಯಾರಿಗೂ ಉದ್ಯೋಗ ನೀಡುವಂತೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ಸಂಬಂಧಿಕರಿಗೆ ಉದ್ಯೋಗ ದೊರಕಿಲ್ಲ ಎಂಬ ಕಾರಣಕ್ಕಾಗಿ ಆಯ್ಕೆ ಪಟ್ಟಿ ರದ್ದು ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಕೆಪಿಎಸ್ಸಿ ಹಗರಣದಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಬೆಲೆ ಕೊಡದ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್‌ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿರೋಧ ಪಕ್ಷಗಳ ಅಭಿಪ್ರಾಯ ನಿರ್ಲಕ್ಷಿಸುತ್ತಿದೆ. ಇದೇ ಧೋರಣೆ ಮುಂದುವರಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಗದೀಶ್ ಶೆಟ್ಟರ್ ಹೇಳುವುದೇನು?

ಜಗದೀಶ್ ಶೆಟ್ಟರ್ ಹೇಳುವುದೇನು?

ಕೆಪಿಎಸ್ಸಿ ಹಗರಣದ ಬಗ್ಗೆ ಮಾತನಾಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆಪಿಎಸ್‌ಸಿ ನೇಮಕಾತಿ ಪಟ್ಟಿ ರದ್ದು ಸರಿಯಲ್ಲ ಎಂದು ಹೇಳಿದ್ದಾರೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀ­ತಾಗಿದ್ದು, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳದೆ, ನೇಮಕಾತಿ ಪಟ್ಟಿ ರದ್ದು ಮಾಡಿದ್ದು ಸರಿಯಲ್ಲ. ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ­ಯಲ್ಲಿ ಉಪ ಚುನಾವಣೆ ನಂತರ ಭಾಗವಹಿಸುವೆ ಎಂದು ಬಳ್ಳಾರಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+