KPSC ಲೋಪ: ಮುಖ್ಯ ಕಾರ್ಯದರ್ಶಿ ಅತೀಕ್ ವಿರುದ್ಧ ಕರವೇ ಗಂಭೀರ ಆರೋಪ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮರುಪರೀಕ್ಷೆಯಲ್ಲೂ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಮಹಾ ಎಡವಟ್ಟುಗಳನ್ನು ಮಾಡುವ ಮೂಲಕ ಪರೀಕ್ಷಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪ್ರಕರಣವು ಇದೀಗ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಸುತ್ತಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅತೀಕ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
384 ಪ್ರೊಬೆಷನರಿ ಗೆಜೆಟೆಡ್ ಅಧಿಕಾರಿಗಳ ಹುದ್ದೆಗೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಮರುಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸುವ ಕಾರ್ಯವನ್ನು ಸರ್ಕಾರ ಇಷ್ಟು ಹೊತ್ತಿಗೆ ಮಾಡಬೇಕಿತ್ತು. ಆದರೆ ತಾವೇ ಇದಕ್ಕೆ ಅಡ್ಡಿಯಾಗಿದ್ದೀರಿ ಎಂದು ಮೊದಲಿನಿಂದಲೂ ವಿದ್ಯಾರ್ಥಿಗಳು ಹೇಳುತ್ತಿದ್ದರು. ಕಳೆದ ಬಾರಿ ಇಡೀ ಪರೀಕ್ಷೆಯೇ ರದ್ದಾಗಲು ಮುಖ್ಯ ಕಾರಣರಾದ ಪರೀಕ್ಷಾ ನಿಯಂತ್ರಕರನ್ನು ತಾವು ಬೆಂಬಲಿಸುತ್ತಿದ್ದೀರಿ. ಪರೀಕ್ಷಾ ನಿಯಂತ್ರಕರು ಅದೇ ಹುದ್ದೆಯಲ್ಲಿ ಮುಂದುವರೆಯಲು ಕೂಡ ನೀವೇ ಕಾರಣ, ಅಷ್ಟೇ ಅಲ್ಲದೆ ಮರುಪರೀಕ್ಷೆಯಲ್ಲಾದ ತಪ್ಪುಗಳ ಬಗ್ಗೆ ತಾವು ಸಿಎಂ ಸಿದ್ದರಾಮಯ್ಯ ಅವರಿಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸಿದ್ದೀರಿ ಎಂಬ ಆರೋಪ ಕೂಡ ವಿದ್ಯಾರ್ಥಿಗಳದ್ದು ಎಂದು ನಾರಾಯಣಗೌಡ ಹೇಳಿದ್ದಾರೆ.

ಇಷ್ಟೆಲ್ಲ ಆದರೂ ನಾನು ಇದ್ಯಾವುದನ್ನೂ ನಂಬಲಿಲ್ಲ. ಆದರೆ ಈ ನಡುವೆ ನನಗೂ ಕೂಡ ಈ ಆರೋಪಗಳಲ್ಲಿ ಹುರುಳಿರಬಹುದು ಎಂದು ಅನಿಸುತ್ತಿದೆ. ಮರುಪರೀಕ್ಷೆಯಲ್ಲಿ ಆದ ಅವಾಂತರದ ಕುರಿತು ತಿಪ್ಪೆ ಸಾರಿಸುವ ಧಾಟಿಯಲ್ಲಿ ತಾವು ಹಾಕಿದ ಪೋಸ್ಟ್ ಕೂಡ ಇದಕ್ಕೆ ಇಂಬು ನೀಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ತಾವು ಮುಖ್ಯಮಂತ್ರಿಗಳ ಅತ್ಯಂತ ನಂಬಿಕಸ್ಥ ಅಧಿಕಾರಿಗಳಲ್ಲಿ ಒಬ್ಬರು. ಈ ಕಾರಣದಿಂದಲೇ ತಾವು ನಿವೃತ್ತರಾದರೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯನ್ನಾಗಿ ಮುಂದುವರೆಸಿರುವುದೂ ಗೊತ್ತಿದೆ. ಸರ್ಕಾರಿ ಸೇವೆಯ ಕೊನೆಯ ಹಂತದಲ್ಲಿ ತಾವು ಈ ಕಳಂಕ ಹೊತ್ತು ನಿವೃತ್ತರಾಗಬೇಕೆ ಎಂಬುದು ನನ್ನ ಪ್ರಶ್ನೆ ಎಂದು ಕೇಳಿದ್ದಾರೆ.
ಈ ಕಾರಣಕ್ಕಾಗಿ ನೇರವಾಗಿ ನಿಮಗೆ ಹತ್ತು ಪ್ರಶ್ನೆಗಳನ್ನ ಮುಂದಿಡುತ್ತಿದ್ದೇನೆ. ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅಧಿಕಾರಿ. ಹೀಗಾಗಿ ನಿಮ್ಮ ಪ್ರಾಮಾಣಿಕ ಉತ್ತರವನ್ನು ನಿರೀಕ್ಷಿಸುತ್ತೇನೆ. ಒಂದು ವೇಳೆ ಮುಖಾಮುಖಿ ಚರ್ಚೆಗೆ ತಾವು ಒಪ್ಪುವುದಾದರೆ ಪರೀಕ್ಷೆ ಬರೆದ ಒಂದಿಬ್ಬರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ನಿಮ್ಮನ್ನು ಭೇಟಿ ಮಾಡುತ್ತೇನೆ. ಸ್ಥಳ, ಸಮಯ ನೀವೇ ನಿಗದಿ ಮಾಡಿ. ಆದರೆ, ಈ ಪ್ರಶ್ನೆಗಳಿಗೆ ಉತ್ತರಿಸದೇ ಇರಬೇಡಿ. ನೀವು ನನ್ನ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾಗಿ ಉತ್ತರಿಸಿದರೆ, ನಾವೀಗ ನಡೆಸುತ್ತಿರುವ ಹೋರಾಟವನ್ನೇ ಕೈಬಿಡುತ್ತೇವೆ. ಇಲ್ಲವಾದಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಒಟ್ಟು 80 ಕಡೆ ತಪ್ಪುಗಳಾಗಿವೆ. ಇದಕ್ಕಿಂತ ಬೇಜವಾಬ್ದಾರಿ ಇನ್ನೇನಿರಲು ಸಾಧ್ಯ? ಇಷ್ಟು ತಪ್ಪುಗಳಿದ್ದಾಗ ವಿದ್ಯಾರ್ಥಿಗಳು ಹೇಗೆ ಉತ್ತರ ಬರೆಯಲು ಸಾಧ್ಯ? ಈ ಎಲ್ಲ ತಪ್ಪುಗಳನ್ನು ನೀವು ಒಪ್ಪಿಕೊಳ್ಳುವಿರಾ? ಒಪ್ಪಿಕೊಳ್ಳದೇ ಹೋದರೆ ನೀವು ಸೂಚಿಸುವ ಕನ್ನಡದ ವಿದ್ವಾಂಸರ ಮುಂದೆ ಪ್ರಶ್ನೆ ಪತ್ರಿಕೆಗಳನ್ನು ಇಡೋಣ. ಸರಿಯೋ ತಪ್ಪೋ ಎಂಬುದನ್ನು ಅವರು ವಿಶ್ಲೇಷಣೆ ಮಾಡಲಿ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಎಂದು ಸವಾಲು ಹಾಕಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೂ ಕೂಡ ಕನ್ನಡಿಗರೇ. ಈಗ ಮತ್ತೆ ಮರುಪರೀಕ್ಷೆಯಾದರೆ ಅವರಿಗೆ ಅನ್ಯಾಯವಾಗುವುದಿಲ್ಲವೇ ಎಂದು ನಿನ್ನೆ ನೀವು ಹೇಳಿದಿರಿ. ಈ ಹೋರಾಟ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ವಿರುದ್ಧವಲ್ಲ. ಒಂದು ವೇಳೆ ಅವರಿಗೆ ನೀಡಿದ ಪ್ರಶ್ನೆಪತ್ರಿಕೆಗಳಲ್ಲಿ ಹೀಗೆ 80 ತಪ್ಪುಗಳಾಗಿದ್ದರೆ ಅವರ ಪರವಾಗಿಯೂ ನಾನು ಹೋರಾಟ ಮಾಡುತ್ತಿದ್ದೆ. ಅವರಿಗೆ ನೀಡಿದ ಇಂಗ್ಲಿಷ್ ಪತ್ರಿಕೆಗಳಲ್ಲಿ ತಪ್ಪುಗಳು ಆಗಿಲ್ಲ ಎಂದಿದ್ದಾರೆ. ಇದೇ ರೀತಿ ಹತ್ತು ಸುದೀರ್ಘ ಪ್ರಶ್ನೆಗಳನ್ನು ನಾರಾಯಣಗೌಡರು ಕೇಳಿದ್ದಾರೆ.












Click it and Unblock the Notifications