KPSC: ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯ: ಸರ್ಕಾರಕ್ಕೆ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಕ್ಲಾಸ್!
KPSC: ಕರ್ನಾಟಕದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿಯಿಂದ ಅನ್ಯಾಯವಾಗಿರುವ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಕೆಎಎಸ್ ಪರೀಕ್ಷೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಇದೀಗ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕೆ.ಎ.ಎಸ್. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿಯಿಂದ ಅನ್ಯಾಯವಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು ಹಿಂದೊಮ್ಮೆ ನಡೆಸಿದ ಕೆ.ಎ.ಎಸ್. ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕನ್ನಡದ ಅನುವಾದದಲ್ಲಿ ಆಗಿದ್ದ ಅನಾಹುತದಿಂದ ನೀವು ಮರುಪರೀಕ್ಷೆಗೆ ಆದೇಶ ಮಾಡಿದ್ದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮುಂದುವರಿದು ಮರುಪರೀಕ್ಷೆಗೆ ಆದೇಶ ಮಾಡಿದ್ದು ಸರಿ.ಆದರೆ, ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲೂ ಕನ್ನಡದ ಅನುವಾದದ ಅನಾಹುತ ಮರುಹುಟ್ಟು ಪಡೆದಿತ್ತು. ಈ ಕುರಿತು ಪ್ರತಿಭಟನೆಯೂ ನಡೆಯಿತ್ತು. ಈಗ ಫಲಿತಾಂಶ ಪ್ರಕಟವಾಗಿದೆ. ಕನ್ನಡದಲ್ಲಿ ಬರೆದವರು, ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಅನುತ್ತೀರ್ಣರಾಗಿದ್ದಾರೆ. ಕೇವಲ ಶೇ. 15ರಿಂದ 20ರಷ್ಟು ಕನ್ನಡ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆಂದೂ ಇದಕ್ಕೆ ಕನ್ನಡಾನುವಾದದ ಗೊಂದಲವೇ ಪ್ರಮುಖ ಕಾರಣವೆಂದೂ ಕನ್ನಡದಲ್ಲಿ ಬರೆದ ಅಭ್ಯರ್ಥಿಗಳು ಹೇಳುತ್ತಿದ್ದಾರೆ ಎಂದು ಅವರು ಅಭ್ಯರ್ಥಿಗಳ ಸಂಕಷ್ಟವನ್ನು ವಿವರಿಸಿದ್ದಾರೆ.

ಈ ರೀತಿ ಮತ್ತೆ ಮತ್ತೆ ಕನ್ನಡಾನುವಾದದ ತಪ್ಪುಗಳು ಸಂಭವಿಸುವುದರಿಂದ ಕನ್ನಡ ಯಾಕೆ ಬೇಕು ಎಂಬ ಮನೋಭಾವವೂ ಬೆಳೆಯುತ್ತದೆ. ಕನ್ನಡಪರ ಮನೋಧರ್ಮಕ್ಕೆ ತೀವ್ರ ಹಿನ್ನಡೆಯಾಗುತ್ತದೆ. ಇದು ಒಂದು ಪರೀಕ್ಷೆಯ ವಿಷಯವಷ್ಟೇ ಆಗದೆ ಕನ್ನಡಪರ ಕಾಳಜಿಯ ವಿಷಯವೂ ಆಗುತ್ತದೆ. ಆದ್ದರಿಂದ ಕೂಡಲೇ ಪರಿಹಾರ ಮಾರ್ಗ ಕಂಡುಕೊಳ್ಳಲು ಮುಂದಾಗಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಸರ್ಕಾರವನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.
ಮೂರು ಮನವಿಗಳು
* ಕರ್ನಾಟಕದಲ್ಲಿ ನಡೆಸುವ ಪರೀಕ್ಷೆಗಳಿಗೆ ಮೊದಲು ಆಂಗ್ಲ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಮಾಡಿ, ಆನಂತರ ಕನ್ನಡಕ್ಕೆ ಅನುವಾದಿಸುವುದೇ ತಪ್ಪು ಕ್ರಮವಾಗಿದೆ. ಇದು ಕರ್ನಾಟಕದ ಆಡಳಿತ ಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ವಾಸ್ತವವಾಗಿ ಮೊದಲು ಕನ್ನಡದಲ್ಲಿ ಪ್ರಶ್ನೆಪತ್ರಿಕೆಯನ್ನು ಸಿದ್ಧಮಾಡಿ, ಅದನ್ನು ಆನಂತರ ಆಂಗ್ಲ ಭಾಷೆಗೆ ಅನುವಾದಿಸುವುದು ಸರಿಯಾದ ಕ್ರಮ. ಹೀಗೆ ಮಾಡದೆ ಕನ್ನಡದ ಬದಲು ಆಂಗ್ಲಭಾಷೆಗೆ ಆದ್ಯತೆ ನೀಡಿ ಸರ್ಕಾರದ ಆಡಳಿತ ಭಾಷಾ ನೀತಿಯನ್ನು ಉಲ್ಲಂಘಿಸಿರುವವರ ಮೇಲೆ ಸುತ್ತೋಲೆ ಸಂಖ್ಯೆ: ಸಂಕ ಇ 39 ಕೆ.ಪಿ.ಎಲ್. 2002 ದಿನಾಂಕ 13-6-2002ರ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮೊದಲು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಮಾಡುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

* ಕನ್ನಡದಲ್ಲಿ ಉತ್ತರ ಬರೆದವರು ಬಹುದೊಡ್ಡ ಪ್ರಮಾಣದಲ್ಲಿ ಅನುತ್ತೀರ್ಣರಾಗಿರುವ ಬಗ್ಗೆ ಸೂಕ್ತ ಪರಿಶೀಲನೆ ಆಗಬೇಕು. ಅಲ್ಲಿಯ ವರೆಗೆ ಈ ಫಲಿತಾಂಶವನ್ನು ದಯಮಾಡಿ ತಡೆ ಹಿಡಿಯಬೇಕು.
* ಕನ್ನಡದಲ್ಲಿ ಉತ್ತರ ಬರೆದ ಕಾರಣಕ್ಕೆ ಅಂದರೆ ಅನುವಾದದ ಗೊಂದಲದ ಕಾರಣದಿಂದ ಫೇಲ್ ಆಗಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದು ಪಾಸ್ ಅಥವಾ ಫೇಲ್ ವಿಷಯಕ್ಕೆ ಮಾತ್ರ ಸೀಮಿತವಾಗದೆ. ಕನ್ನಡ ಬಳಕೆಯಲ್ಲಾದ ತಪ್ಪುಗಳ ಪರಿಣಾಮ ಎಂಬುದನ್ನು ಗಮನಿಸ ಬೇಕು. ಈ ನಿಟ್ಟಿನಲ್ಲಿ ಶೀಘ್ರ ಪರಿಶೀಲನೆಯ ಅಗತ್ಯವಿದೆ. ಇದು ಕನ್ನಡಪರ ಕಾಳಜಿಯುಳ್ಳ ತಮ್ಮಲ್ಲಿ ನನ್ನ ವಿನಂತಿ. ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ಈ ಪತ್ರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications