ಸಿಎಂ ಕಾಮನ್ ಅಲ್ಲ Costly Man: ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ್ ರೇಣು
ಬೆಂಗಳೂರು ನವೆಂಬರ್ 22: ''ಅಕಾಲಿಕ ಮಳೆಯಿಂದಾಗಿ ರಾಜ್ಯದ ಹಾಗೂ ಬೆಂಗಳೂರು ನಗರದ ಜನರು ಪರಿತಪಿಸುತ್ತಿದ್ದರೆ ಜನರು ಹಾಗೂ ರೈತರ ಬಗ್ಗೆ ಯಾವುದೇ ಕಾಳಜಿ ತೋರಿಸದೇ ಇರುವ ಮುಖ್ಯಮಂತ್ರಿಗಳು ಕಾಮನ್ ಅಲ್ಲ Costly Man,'' ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಕಳೆದೊಂದು ವಾರದಿಂದ ರಾಜ್ಯದಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಾಜ್ಯದ ರೈತರು ತೀವ್ರ ತೊಂದರೆಗೀಡಾಗಿದ್ದಾರೆ. ಬೆಂಗಳೂರು ನಗರದಲ್ಲೂ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಇತರೆ ಮುಖ್ಯಮಂತ್ರಿಗಳು ಇಂತಹ ಸಂದರ್ಭದಲ್ಲಿ ಮಳೆಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು. ನವದೆಹಲಿಗೆ ತೆರಳುವ ಸಂಧರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ವಿಶೇಷ ವಿಮಾನ ವ್ಯವಸ್ಥೆ ಮಾಕೊಳ್ಳುವ ಸಿಎಂ, ಕನಿಷ್ಠ ಹೆಲಿಕಾಪ್ಟರ್ ನಲ್ಲಾದರೂ ಸಮೀಕ್ಷೆ ಮಾಡಬಹುದಿತ್ತು. ರೈತರ ಸಹಾಯಕ್ಕೆ ಧಾವಿಸುವ ಬದಲಾಗಿ ನಮ್ಮ ಮುಖ್ಯಮಂತ್ರಿಗಳು ಬೆಂಗಳೂರು ನಗರದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಉಸ್ತುವಾರಿಯೂ ಆಗಿರುವ ಮುಖ್ಯಮಂತ್ರಿಗಳು ಇದುವರೆಗೆ ಒಂದೇ ಒಂದು ಬಾರಿ ಮಳೆಯಿಂದ ತೊಂದರೆಗೀಡಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರಕ್ಕೆ ಫ್ಲೈಯಿಂಗ್ ವಿಸಿಟ್ ಮಾಡಿದ್ದಾರೆ. ಇಂತಹ ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು ಕಾಮನ್ ಮ್ಯಾನ್ ಗಿರುವ ಬದ್ದತೆಯನ್ನು ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನಸಾಮಾನ್ಯರ ಮುಖ್ಯಮಂತ್ರಿ ನಾನು ಕಾಮನ್ ಮ್ಯಾನ್ ಎಂದು ತಮ್ಮ ಎದೆ ತಟ್ಟಿಕೊಂಡಿದ್ದ ಮುಖ್ಯಮಂತ್ರಿಗಳು ಬದ್ದತೆ ಕೇವಲ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದೋ ಎಂದು ಟೀಕಿಸಿದ್ದಾರೆ.
ಮಳೆಬಾಧಿತ ಪ್ರದೇಶಗಳಿಗೆ ಸಿಎಂ ಭೇಟಿ
ಚಿಕ್ಕಬಳ್ಳಾಪುರ ನಗರ ಮತ್ತು ಜಿಲ್ಲೆಯ ವಿವಿಧ ಮಳೆಬಾಧಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಪೂರ್ತಿ ಕುಸಿದು ಬಿದ್ದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದಿದ್ದಾರೆ.
ಮಳೆಯಿಂದಾಗಿ ಹಲವು ಬೆಳೆಗಳು, ಮನೆಗಳಿಗೆ ಹಾನಿಗೊಳಗಾಗಿ ಆರ್ಥಿಕ ನಷ್ಟವಾಗಿದೆ. ನಷ್ಟವಾಗಿರುವ ಅಂದಾಜನ್ನು ಸಮೀಕ್ಷೆ ನಡೆಸಿ ಸಂಪೂರ್ಣ ಮತ್ತು ಸಮಗ್ರ ವರದಿ ನೀಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರಾಥಮಿಕ ವರದಿ ಲಭ್ಯವಾಗಿದ್ದು, ಒಟ್ಟಾರೆಯಾಗಿ ಆಗಿರುವ ನಷ್ಟದ ಸಮಗ್ರ ಮಾಹಿತಿ ಸಂಗ್ರಹ, ವಿಶ್ಲೇಷಣೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ ಎಂದರು.

ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಮಳೆಬಾಧಿತ ಪ್ರದೇಶಗಳ ಜನರಿಗೆ ಸ್ಪಂದಿಸಲಾಗುವುದು. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳಿಗೆ ಕೂಡಲೇ 10 ಸಾವಿರ ರೂಪಾಯಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ 5 ಲಕ್ಷ ಮತ್ತು ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಸ್ವಲ್ಪ ಹಾನಿ ಅಥವಾ ಧಕ್ಕೆಯಾದ ಮನೆಗಳಿಗೆ ಐವತ್ತು ಸಾವಿರ ನೀಡಲು ಅವಕಾಶವಿದೆ ಎಂದು ಹೇಳಿದರು.
ನೀತಿ ಸಂಹಿತೆ ಅಡ್ಡಿ?
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ನೀತಿ ಸಂಹಿತೆಗೆ ಕೊಂಚ ರಿಯಾಯಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಈಗಾಗಲೇ ಪತ್ರವನ್ನೂ ಬರೆಯಲಾಗಿದೆ. ಈ ಬಗ್ಗೆ ಆಯೋಗ ಸೂಕ್ತ ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳುವ ವಿಶ್ವಾಸವಿದೆ. ಈ ಮಧ್ಯೆ ರಾಜ್ಯ ಸಚಿವ ಸಂಪುಟದ ಸದಸ್ಯರು ಮಳೆಬಾಧಿತ ಪ್ರದೇಶಗಳಲ್ಲಿ ಕೆಲಸ ಮಾಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳೂ ತಮ್ಮ ತಮ್ಮ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.