DK Shivakumar Welcomed Jagadish Shettar: ಸೋಲಿಲ್ಲದ ಸರದಾರ, ಶ್ರೇಷ್ಠ ರಾಜಕಾರಣಿ ಜಗದೀಶ್ ಶೆಟ್ಟರ್
ಬೆಂಗಳೂರು, ಏಪ್ರಿಲ್ 17: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಅಧಿಕೃತವಾಗಿ ಇಂದು(ಏಪ್ರಿಲ್ 17)ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶೆಟ್ಟರ್ ಹೊಸ ಪಕ್ಷದ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಶಾಲು ಹಾಕಿ, ಧ್ವಜ ನೀಡುವ ಮೂಲಕ ಕೆ. ಸಿ. ವೇಣುಗೋಪಾಲ್ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೂ ಮೊದಲು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರಾಜಕೀಯ ಸಾಧನೆಗಳನ್ನು ಹಾಗೂ ಬಿಜೆಪಿಯಲ್ಲಿ ಅವರ ಸೇವೆಗಳನ್ನು ನೆನೆದು ಹೊಗಳಿ ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿಕೊಂಡಿದ್ದಾರೆ.

ಸೋಲಿಲ್ಲದ ಸರದಾರ, ಸ್ವಾಭಿಮಾನಿ ಜಗದೀಶ್ ಶೆಟ್ಟರ್; - ಡಿ.ಕೆ ಶಿವಕುಮಾರ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ರಾಜ್ಯದ ಹಾಗೂ ರಾಷ್ಟ್ರದ ಕಾಂಗ್ರೆಸ್‌ನವರು ಈ ಕ್ಷಣಗಣನೆಯನ್ನು ನೋಡುತ್ತಿದ್ದಾರೆ. ಇಂದು ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ದೊಡ್ಡ ಸಂದೇಶ ನೀಡುತ್ತಿದ್ದೇವೆ. ಒಬ್ಬ ಸರಳ ಸಜ್ಜನಿಕೆಯ ಶ್ರೇಷ್ಠ ರಾಜಕಾರಣಿ. ಆರು ಬಾರಿ ಶಾಸಕರಾಗಿದ್ದವರು. ಸೋಲಿಲ್ಲದ ಸರದಾರ, ಸ್ವಾಭಿಮಾನಿ. ಬಹುಶಃ ಅವರ ಹೆಸರಿನಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿರುವ ವ್ಯಕ್ತಿ.
ಸುಮಾರು ನೆಲವತ್ತು ನೆಲವತೈದು ವರ್ಷ ಸಂಘ ಪರಿವಾರ, ಬಿಜೆಪಿಗಾಗಿ ಕೆಲಸ ಮಾಡಿ, ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಂದು ಇಡೀ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ನೀಡಲು ನಮ್ಮ ಮುಂದೆ ನಿಂತಿದ್ದಾರೆ.
ಈ ಎಲ್ಲಾ ಸಂಘಟನೆಯ ಜೊತೆಗೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಅಂತಹ ವಿಶೇಷ ವ್ಯಕ್ತಿ. ಸಂಪೂರ್ಣ ರಾಜ್ಯಕ್ಕೆ, ಎಲ್ಲಾ ಪಕ್ಷಗಳು ಕೂಡ ಒಂದು ಆಶ್ಚರ್ಯ ಮೂಡುವಂತಹ ಶಕ್ತಿ ನಮ್ಮ ಮುಂದೆ ಕುಳಿತಿದ್ದಿದ್ದಾರೆ. ಅಂತಹ ವಿಶೇಷ ವ್ಯಕ್ತಿ ಜಗದೀಶ್ ಶೆಟ್ಟರ್ ಅವರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರವಾಗಿ ಸ್ವಾಗತ ಎಂದು ಡಿ.ಕೆ ಶಿವಕುಮಾರ್ ಜಗದೀಶ್ ಶೆಟ್ಟರ್ ಅವರನ್ನು ಬಾಯ್ತುಂಬ ಹೊಗಳಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿಕೊಂಡಿದ್ದಾರೆ.

ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ. ಪಕ್ಷ ನನಗೆ ಎಲ್ಲಾ ಗೌರವ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ಕಳೆದ ಆರು ತಿಂಗಳಿನಿಂದ ನನ್ನನ್ನು ಕಡೆಗಣಿಸಲಾಗಿದೆ. ಶೆಟ್ಟರ್ ನಿಮಗೆ ಟಿಕೆಟ್ ನೀಡುವುದಿಲ್ಲ ಎಂದು 15 ದಿನಗಳ ಮುಂಚೆ ಹೇಳಬಹುದಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆಸಿಕೊಂಡ ರೀತಿ ಸರಿ ಇಲ್ಲ. ಎರಡು ಪಟ್ಟಿ ಬಂದರೂ ನಿಮ್ಮ ಹೆಸರಿಲ್ಲ ಎಂದು ಅಭಿಮಾನಿಗಳು, ಕಾರ್ಯಕರ್ತರು ಕೇಳಲು ಆರಂಭಿಸಿದರು. ಹಿರಿಯ ನಾಯಕನಾದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಪಕ್ಷವನ್ನು ಬಿಡುವ ತೀರ್ಮಾನ ಮಾಡಿದೆ ಎಂದಿದ್ದಾರೆ.












Click it and Unblock the Notifications