ಕಾಂಗ್ರೆಸ್ ಮಹತ್ವದ ಸಭೆ; ದೆಹಲಿಗೆ ತೆರಳಿದ ಡಿ. ಕೆ. ಶಿವಕುಮಾರ್
ಬೆಂಗಳೂರು, ಮಾರ್ಚ್ 13; ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮಹತ್ವದ ಸಭೆ ಭಾನುವಾರ ಸಂಜೆ 4 ಗಂಟೆಗೆ ನಡೆಯಲಿದೆ. ಈ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗುವ ಸುದ್ದಿಗಳು ಹಬ್ಬಿವೆ.
ಮಹತ್ವದ ಸಭೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಬುಲಾವ್ ನೀಡಿವೆ. ಶನಿವಾರ ರಾತ್ರಿಯೇ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಡಿ. ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಜೊತೆ ಭಾನುವಾರ ಸಭೆ ನಡೆಸಲಿದ್ದಾರೆ.
ಪದಾಧಿಕಾರಿಗಳ ನೇಮಕ; ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಕುರಿತು ಹೈಕಮಾಂಡ್ ನಾಯಕರ ಜೊತೆ ಡಿ. ಕೆ. ಶಿವಕಮಾರ್ ಚರ್ಚೆ ಮಾಡಲಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯುವುದರಿಂದ ಪದಾಧಿಕಾರಿಗಳ ನೇಮಕ ಮಹತ್ವ ಪಡೆದಿದೆ.

ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಹಂತದ ಪದಾಧಿಕಾರಿಗಳ ನೇಮಕಾತಿ ಹಲವು ದಿನದಿಂದ ಬಾಕಿ ಉಳಿದಿದೆ. ಜಿಲ್ಲಾ ಅಧ್ಯಕ್ಷರ ನೇಮಕದ ಕುರಿತು ಆಯಾ ಜಿಲ್ಲೆಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು. ಅದರಲ್ಲೂ 2023ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ರಾಜ್ಯದ ಮೇಲೆ ಹೆಚ್ಚಿನ ಗಮನ ಕೊಟ್ಟಿದೆ. ಆದ್ದರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ.
ಪದಾಧಿಕಾರಿಗಳ ನೇಮಕ, ಜಿಲ್ಲಾ ಅಧ್ಯಕ್ಷರ ನೇಮಕ ಮುಂತಾದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಚುನಾವಣಾ ಸಿದ್ಧತೆ ಆರಂಭಿಸುವುದು ಪಕ್ಷದ ಲೆಕ್ಕಾಚಾರವಾಗಿದೆ. ಅದರಲ್ಲೂ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯಲಿದೆ ಎಂಬ ಸುದ್ದಿಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತಷ್ಟು ಚುರುಕಾಗಿದೆ.
ಈಗ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತು ಪ್ರಚಾರ ಸಮಿತಿ ಅಧ್ಯಕ್ಷರು ಮಾತ್ರ ಇದ್ದಾರೆ. ಉಳಿದ ಪದಾಧಿಕಾರಿಗಳ ನೇಮಕವಾಗಬೇಕಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಡಿ. ಕೆ. ಶಿವಕುಮಾರ್ ಜೊತೆ ಸಭೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಉತ್ತರ ಪ್ರದೇಶ ಸೇರಿದಂತೆ 4 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಉತ್ಸಾಹದಲ್ಲಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಜೊತೆಗೆ ಕರ್ನಾಟಕದಲ್ಲಿಯೂ ಅವಧಿಗೆ ಮೊದಲೇ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ಅವಧಿಗೆ ಮೊದಲೇ ಕರ್ನಾಟಕದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಸನ್ನದ್ಧವಾಗಿದೆ ಎಂದು ಪಕ್ಷದ ನಾಯಕರು ಘೋಷಣೆ ಮಾಡಿದ್ದಾರೆ. ಪದಾಧಿಕಾರಿಗಳನ್ನು ನೇಮಕಗೊಳಿಸಿ ಚುನಾವಣಾ ತಯಾರಿ ಚುರುಕುಗೊಳಿಸಲು ನಾಯಕರು ತೀರ್ಮಾನಿಸಿದ್ದಾರೆ.
ಹಲವು ನಾಯಕರ ಸೇರ್ಪಡೆ; ಜೆಡಿಎಸ್ ಸೇರಿದಂತೆ ವಿವಿಧ ಪಕ್ಷದ ಹಲವು ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಡಿ. ಕೆ. ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆಯನ್ನು ನಡೆಸಲಿದ್ದಾರೆ. ಅದರಲ್ಲೂ ಶಾಸಕರು ಪಕ್ಷಕ್ಕೆ ಬಂದರೆ ಮಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವ ಸವಾಲು ಪಕ್ಷದ ಮುಂದಿದೆ.
ಡಿ. ಕೆ. ಶಿವಕುಮಾರ್ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯದ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದರು. ಗೋವಾ ಚುನಾವಣೆ ವಿಧಾನಸಭೆ ಫಲಿತಾಂಶ ಘೋಷಣೆಯಾಗುವಾಗ ಹೈಕಮಾಂಡ್ ಡಿ. ಕೆ. ಶಿವಕುಮಾರ್‌ರನ್ನು ಪಣಜಿಗೆ ಕಳಿಸಿತ್ತು. ಈಗ ಕರ್ನಾಟಕದ ಚುನಾವಣೆ ಬಗ್ಗೆ ಚರ್ಚಿಸಲು ಮತ್ತೆ ದೆಹಲಿಗೆ ಕರೆದಿದೆ.












Click it and Unblock the Notifications