ಉಪ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ಸಿದ್ಧ
ಬೆಂಗಳೂರು, ಜು. 31 : ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸಿ ಕೊಡಲಾಗಿದೆ. ಹೈಕಮಾಂಡ್ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಿದ ಬಳಿಕ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.
ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕ ಮಾಡಿ ಹೈಕಮಾಂಡ್ ಗೆ ಪಟ್ಟಿಯನ್ನು ರವಾನಿಸಿದ್ದಾರೆ. ಬಳ್ಳಾರಿ ಮತ್ತು ಶಿಕಾರಿಪುರ ಕ್ಷೇತ್ರಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದರಿಂದ ಪಟ್ಟಿ ಅಂತಿಮಗೊಳಿಸುವುದು ವಿಳಂಬವಾಯಿತು.

ಅಂತಿಮ ಪಟ್ಟಿಯ ಪ್ರಕಾರ ಶಿಕಾರಿಪುರ ಕ್ಷೇತ್ರಕ್ಕೆ ಶಾಂತ ವೀರಪ್ಪ ಗೌಡ, ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಎನ್.ವೈ.ಗೋಪಾಲಕೃಷ್ಣ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಸಂಸದ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. [ಉಪ ಚುನಾವಣೆಗೆ ಜೆಡಿಎಸ್ ಸ್ಪರ್ಧೆ ಇಲ್ಲ]
ಬಳ್ಳಾರಿ ಕಗ್ಗಂಟು : ಚಿಕ್ಕೋಡಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಾಂಗ್ರೆಸ್ ಸುಲಭವಾಗಿ ಆಯ್ಕೆ ಮಾಡಿತ್ತು. ಆದರೆ, ಶಿಕಾರಿಪುರ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಠಿಣವಾಗಿತ್ತು. [ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳು]
ಶಿಕಾರಿಪುರ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಶಾಂತವೀರಪ್ಪಗೌಡ ಮತ್ತು ಪಕ್ಷದ ಮುಖಂಡ ನಗರದ ಮಹದೇವಪ್ಪ ಈ ಪ್ರಬಲ ಆಕಾಂಕ್ಷಿಗಳಾಗಿದ್ದರು. ಹಿರೇಕೆರೂರಿನ ಮಾಜಿ ಶಾಸಕ ಬಿ.ಸಿ.ಪಾಟೀಲ್ ಸಹ ಶಿಕಾರಿಪುರದಲ್ಲಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ಶಾಂತವೀರಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಬಳ್ಳಾರಿ ಕ್ಷೇತ್ರದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮತ್ತು ಬಳ್ಳಾರಿಯ ಕಾಂಗ್ರೆಸ್ ಮುಖಂಡ ಅಸುಂಡಿ ಹೊನ್ನೂರಪ್ಪ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದರು. ಶಾಸಕ ಅನಿಲ್ ಲಾಡ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ವಹಾಬ್, ದಿವಾಕರ ಬಾಬು, ಎನ್.ವೈ.ಹನುಮಂತಪ್ಪ ಜೊತೆ ಚರ್ಚಿಸಿದ ನಾಯಕರು ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಶುಕ್ರವಾರ ಹೈಕಮಾಂಡ್ ನಾಯಕರು ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಿದ ಬಳಿಕ ಅಭ್ಯರ್ಥಿಗಳನ್ನು ಕೆಪಿಸಿಸಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.2 ಕೊನೆಯ ದಿನವಾಗಿದ್ದು, ಆ.21ರಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಜೆಡಿಎಸ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ.












Click it and Unblock the Notifications