ರಾಜ್ಯದ ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ: ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು,ಆಗಸ್ಟ್ 03: ರಾಜ್ಯದ ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ ಎಂದು ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಹೆಚ್ಚಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ, ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳಿಗೆ ಚಾರ್ಚ್ ತೆಗೆದುಕೊಳ್ಳದಂತೆ ತಡೆಹಿಡಿಯಲಾಗಿದೆ. ಪ್ರತಿ ಹಂತದಲ್ಲೂ ವರ್ಗಾವಣೆ, ಹಣದ ದಂಧೆ ನಡೆಯುತ್ತಿದೆ ಎಂದು ಹೇಳಿದರು.

ಇನ್ನೂ ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಅವರು, ಸರ್ಕಾರ ಎಸ್ ಐಟಿ ತನಿಖೆಗೆ ಪ್ರಕರಣ ಕೊಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ನಾಳೆ 12.30ಕ್ಕೆ ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ. ಉಡುಪಿ, ಮಂಗಳೂರು ಭಾಗದ ಶಾಸಕರೆಲ್ಲರೂ ರಾಜಭವನಕ್ಕೆ ತೆರಳುತ್ತೇವೆ, ಈ ಪ್ರಕರಣದಲ್ಲಿ ಸರ್ಕಾರ ಡಿವೈಎಸ್‌ಪಿಯಿಂದ ತನಿಖೆ ನಡೆಸುತ್ತಿದೆ. ಆದರೆ, ಅಧಿಕಾರಿಗಳು ಸರ್ಕಾರದ ಮಾತು ಕೇಳಿ ತನಿಖೆ ಮಾಡುತ್ತಾರೆ. ಹೀಗಾಗಿ ನಾವು ಎಸ್‌ಐಟಿ ತನಿಖೆಗೆ ಆಗ್ರಹ ಮಾಡ್ತಿದ್ದೇವೆ ಎಂದು ಹೇಳಿದರು.
ಇನ್ನೂ ಈ ವೇಳೆ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಶಿಕ್ಷಕರ ಅನೇಕ ಸಮಸ್ಯೆಗಳು ನ್ಯಾಯಾಲಯದಲ್ಲಿವೆ, ಇಲ್ಲಿವರೆಗೆ ಅಡ್ವೋಕೇಟ್ ಜನರಲ್ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಭೆಯನ್ನೂ ನಡೆಸಿಲ್ಲ.ಶಾಲಾ ಕಟ್ಟಡ ನಿರ್ಮಾಣಗಳು ಅರ್ಧಕ್ಕೇ ನಿಂತಿವೆ. ಒಂದಷ್ಟು ಬುದ್ಧಿಜೀವಿಗಳು, ಕಮ್ಯುನಿಸ್ಡರನ್ನು ಸೇರಿಸಿಕೊಂಡು ಪಠ್ಯಪುಸ್ತಕ ಬದಲಾವಣೆ, ಎನ್‌ಇಪಿ ಕಿತ್ತುಹಾಕುವುದರಲ್ಲೇ ಮುಳುಗಿದ್ದಾರೆ. ಈ ಸರ್ಕಾರಕ್ಕೆ ಶಿಕ್ಷಣ, ಶಿಕ್ಷಕರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ತಿಳಿಸಿದರು.
ಬೇಲಿಯೇ ಎದ್ದು ಹೊಲ ಮೇಯ್ದರೆ: ರಾಮಸ್ವಾಮಿ
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಮಾತನಾಡಿ, ತಪ್ಪನ್ನು ತಪ್ಪೆಂದು ಹೇಳದಿದ್ದರೆ ಈಗಾಗಲೇ ಕೆಟ್ಟು ಹೋದ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ ಎಂದು ಪ್ರಶ್ನಿಸಿದರು. ಕೆಟ್ಟ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಪ್ರಮುಖವಾಗಿದೆ. ಸಾಂವಿಧಾನಿಕ ಸಂಸ್ಥೆ, ಅಂಗಗಳಲ್ಲಿ, ಲೋಕಾಯುಕ್ತದಂಥ ಸ್ವಾಯತ್ತ ಸಂಸ್ಥೆಗಳಲ್ಲಿ ಕ್ರಮೇಣ ಕುಸಿತ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇಲಿಯೇ ಎದ್ದು ಹೊಲ ಮೇಯ್ದರೆ, ಕಾಪಾಡುವ ದೊರೆಯೇ ಕೊಲೆಗಾರನಾದರೆ ರಕ್ಷಣೆ ಮಾಡುವವರು ಯಾರು ಎಂದು ಕೇಳಿದರು. ಇವತ್ತಿನ ಆಡಳಿತ ವ್ಯವಸ್ಥೆಗೆ ಲಂಗೂ ಇಲ್ಲ; ಲಗಾಮೂ ಇಲ್ಲವಾಗಿದೆ ಎಂದ ಅವರು, ಚುನಾವಣೆಗಳಲ್ಲಿ ಬೀದಿಬೀದಿಗಳಲ್ಲಿ ಹಣ ಚೆಲ್ಲಿದರೂ ಯಾರಿಗೂ ಶಿಕ್ಷೆ ಆಗುತ್ತಿಲ್ಲ ಎಂದು ವಿಷಾದದಿಂದ ನುಡಿದರು.
ಬ್ರಿಟಿಷರ ಈಸ್ಟ್ ಇಂಡಿಯ ಕಂಪೆನಿ ಹೋಗಿದೆ; ವಿಪಕ್ಷಗಳ ಈಟ್ 'ಇಂಡಿಯ' ಕಂಪೆನಿ ಈಗ ಬಂದಿದೆ. ಇವರಿಗೆ ಸ್ಥಿರ ಸರಕಾರ ಕೊಡಲು ಸಾಧ್ಯವೇ ಎಂದು ಕೇಳಿದರು. ಮೋದಿಜಿ ಅವರ ನೇತೃತ್ವದಲ್ಲಿ ದೇಶದ ನಾಯಕತ್ವ ವಿಶ್ವದ ನಾಯಕತ್ವವಾಗಿದೆ. ಇದು ಇವರ ಕೈಯಿಂದ ಸಾಧ್ಯವೇ ಎಂದು ಎ.ಟಿ. ರಾಮಸ್ವಾಮಿ ಅವರು ಪ್ರಶ್ನಿಸಿದರು.
ಪ್ರಾಮಾಣಿಕ ವ್ಯಕ್ತಿಗಳಿಗೆ ಮಾನ್ಯತೆ ಸಿಗುತ್ತಿಲ್ಲ. ವರ್ಗಾವಣೆ ಒಂದು ಉದ್ಯಮ, ದಂಧೆಯಾಗಿದೆ. ಎರಡು ತಿಂಗಳಲ್ಲೇ ಭ್ರಷ್ಟಾಚಾರ ಬೆಳೆದಿದೆ. ಬೆಲೆ ಏರಿಕೆ ಆಗುತ್ತಿದೆ ಎಂದರು. ಇದೆಲ್ಲದರಿಂದ ನುಣುಚಿಕೊಳ್ಳಲು ಈ ನಾಟಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲೂಟಿ ಮಾಡಲೆಂದೇ ನೈಸ್ ವಿಷಯದಲ್ಲಿ ತನಿಖೆ ಮಾಡಲಾಗಿತ್ತು. ದಲಿತರಿಗೆ ನೀಡಿದ್ದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಿದ್ದು ಸರಿಯೇ? ನಾಲಿಗೆ ಒಂದೇ ಎರಡೇ ಎಂದು ನೀವೇ ಹೇಳಿ ಎಂದು ಪ್ರಶ್ನೆ ಮುಂದಿಟ್ಟರು.












Click it and Unblock the Notifications