Accident: ಪ್ರಿ-ವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಭೀಕರ ಅಪಘಾತ: ಹಸೆಮಣೆ ಏರಬೇಕಿದ್ದ ಜೋಡಿ ಸಾವು!
ಇದೇ ಡಿಸೆಂಬರ್ 20ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಇಬ್ಬರೂ ಪ್ರಿವೆಡ್ಡಿಂಗ್ ಶೂಟಿಂಗ್ ಮಾಡಿಸಲು ತೆರಳಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು, ಇನ್ನೇನು ಮನೆಗೆ ವಾಪಸ್ ಆಗುವ ವೇಳೆ ಅಪಘಾತ
ಇತ್ತೀಚೆಗೆ ಮದುವೆಯಾಗುತ್ತಿರುವ ಜೋಡಿಗಳು ಫೋಟೋಶೂಟ್, ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಸೊಗಸಾದ ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ನೂರಾರು ಕಿಲೋಮೀಟರ್ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇದನ್ನು ಮದುವೆ ದಿನದಂದು ಕಲ್ಯಾಣ ಮಂಟಪದ ಸ್ಕ್ರೀನ್‌ನಲ್ಲಿ ಪ್ರದರ್ಶಿಸಿ ಸಂತಸ ಪಡುತ್ತಾರೆ. ಇದೇ ಖುಷಿಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್‌ಗೆ ಹೋಗಿದ್ದ ಜೋಡಿಯೊಂದು ವಾಪಸ್ ಬರುವಾಗ ಭೀಕರ ಅಪಘಾತದಲ್ಲಿ ಪ್ರಾಣ ಬಿಟ್ಟಿದೆ. ಹಸೆಮಣೆ ಏರಬೇಕಿದ್ದ ನವಜೋಡಿಯ ಮನೆಗಳಲ್ಲಿ ಶೋಕ ಆವರಿಸಿದೆ.
ಈ ದಾರುಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಖುಷಿಯಿಂದ ಪ್ರಿವೆಡ್ಡಿಂಗ್ ಫೋಟೋ ಶೂಟ್ ಮುಗಿಸುಕೊಂಡು ಬರುವ ವೇಳೆ ನಡೆದ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾಳೆ. ಇನ್ನು ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಇನ್ನು 12 ದಿನಗಳಲ್ಲಿ ಇವರ ಮದುವೆ ನಿಶ್ಚಯವಾಗಿದ್ದು, ಸಕಲ ತಯಾರಿಯೂ ನಡೆದಿತ್ತು. ಸಪ್ತಪದಿ ತುಳಿಯುವ ಮುನ್ನವೇ ನಡೆದ ಈ ವಿಧಿಯಾಟಕ್ಕೆ ಮದುವೆ ಸಂಭ್ರಮದಲ್ಲಿದ್ದ ಇಬ್ಬರ ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಪ್ಪಳ ತಾಲ್ಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಜೊತೆ ಕಾರಟಗಿಯ ಮುಷ್ಟೂರು ಗ್ರಾಮದ ಕವಿತಾ ಮದುವೆ ಫಿಕ್ಸ್ ಆಗಿತ್ತು. ಇದೇ ಡಿಸೆಂಬರ್ 20ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಇಬ್ಬರೂ ಪ್ರಿವೆಡ್ಡಿಂಗ್ ಶೂಟಿಂಗ್ ಮಾಡಿಸಲು ತೆರಳಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು, ಇನ್ನೇನು ಮನೆಗೆ ವಾಪಸ್ ಆಗುವ ವೇಳೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಬಳಿ ಇವರ ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಅನಾಹುತ ನಡೆದು ಹೋಗಿದೆ..
ಅಪಘಾತ ಸಂಭವಿಸಿದ್ದು ಹೇಗೆ?
ಲಾರಿಯನ್ನು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ವಧು ಕವಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ವರ ಕರಿಯಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯು ಹನುಮನಹಟ್ಟಿಯಲ್ಲಿ ಡಿಸೆಂಬರ್ 20ರಂದು ಸಾಮೂಹಿಕ ವಿವಾಹದಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿತ್ತು. ಸದ್ಯ ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ.
ಕರಿಯಪ್ಪ ಅವರ ಸಹೋದರನ ಮದುವೆ ಕೂಡ ಅದೇ ದಿನ ನಿಶ್ಚಯವಾಗಿತ್ತು. ಅವರು ಕೂಡ ಫೋಟೋಶೂಟ್‌ಗೆ ಬಂದು ವಾಪಸ್ ಆಗಿದ್ದರು. ಆದರೆ ಕರಿಯಪ್ಪ ತನ್ನ ಭಾವಿ ಪತ್ನಿಯನ್ನು ಊರಿಗೆ ಬಿಟ್ಟು ಬರಲು ತೆರಳಿದ್ದಾಗ ಈ ಅಪಘಾತ ಸಂಭವಿಸಿ, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದೆ.












Click it and Unblock the Notifications