Kolkata Doctor Rape Case: ಸರ್ಕಾರಿ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಕರ್ನಾಟಕ ಸರ್ಕಾರ ಆದೇಶ!
ಬೆಂಗಳೂರು ಆಗಸ್ಟ್ 17: ಕೋಲ್ಕತ್ತದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಇಂದು ದೇಶದಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ. ದೇಶದ ಎಲ್ಲಾ ಆಸ್ಪತ್ರೆಗಳ ಸಿಬ್ಬಂದಿಗಳು ಪ್ರಕರಣವನ್ನು ಖಂಡಿಸಿ ಮುಷ್ಕರಕ್ಕೆ ಇಂದು ಮುಂದಾಗಿದ್ದಾರೆ. ಇದರ ಬೆನ್ನಲ್ಲೆ ಇಂದು ಸರ್ಕಾರಿ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ವೈದ್ಯರು ಪ್ರತಿಭಟನೆಗೆ ಮುಂದಾದರೆ ರೋಗಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ಮಂಜೂರು ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇನ್ನೂ ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದು, ಒಪಿಡಿ ಸೇವೆ ಬಂದ್ ಆಗಿದೆ.

ಅದಾಗ್ಯೂ ಎಮರ್ಜೆನ್ಸಿ ಸೇವೆ, ಮೆಡಿಕಲ್ ಶಾಪ್ಸ್, ಇನ್ ಪೇಷೆಂಟ್ ಸೇವೆ, ಹೆರಿಗೆ, ಎಮರ್ಜೆನ್ಸಿ ಸರ್ಜರಿ ಸೇವೆಗಳನ್ನು ಒದಗಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ರೋಗಿಗಳಿಗೆ ತೊಂದರೆಯಾಗುವುದನ್ನು ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು, ಮೈಸೂರು, ಹಾಸನ ಇತರ ಜಿಲ್ಲೆಗಳಲ್ಲಿ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಾಸನ ವೈದ್ಯಕೀಯ ಬೋದಕ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರಿಂದ ಪ್ರತಿಭಟನೆ ನಡೆಯುತ್ತಿದೆ. ಕೈಗೆ ಕಪ್ಪು ಪಟ್ಟಿ ಕಟ್ಟಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಏನಿದು ಪ್ರಕರಣ?
ಆಗಸ್ಟ್ 9ರಂದು ಶುಕ್ರವಾರ 31 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಒಳಗೆ ಅತ್ಯಾಚಾರದ ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿದೆ. ಈ ಹೀನಾಯ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಬುಧವಾರ ವೈದ್ಯಯ ಮೇಲಿನ ಅತ್ಯಾಚಾರ ಖಂಡಿಸಿ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ 40-50 ಅಪರಿಚಿತ ದುಷ್ಕರ್ಮಿಗಳ ಗುಂಪು ಆಸ್ಪತ್ರೆಗೆ ಪ್ರವೇಶಿಸಿ ಕೈಗೆ ಸಿಕ್ಕ ವಸ್ತುಗಳನೆಲ್ಲಾ ಧ್ವಂಸಗೊಳಿಸಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು ಆಸ್ಪತ್ರೆ ಆವರಣವನ್ನು ಭೇದಿಸಿ, ಬ್ಯಾರಿಕೇಡ್‌ಗಳಿಂದಲೂ ನುಗ್ಗಿ ಬರಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವವಾಗಿದೆ. ಪೊಲೀಸ್ ಸಿಬ್ಬಂದಿ ಆವರಣದಲ್ಲಿದ್ದರೂ ವಿಧ್ವಂಸಕ ಕೃತ್ಯ ನಡೆದಿದೆ ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಗೂಂಡಾಗಳು ಕ್ಯಾಂಪಸ್‌ಗೆ ನುಗ್ಗಿ ಧರಣಿ ನಿರತ ವೈದ್ಯರಿಗೆ ಥಳಿಸಿದ್ದಾರೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನವಾಗಿದೆ ಎಂದು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೂಂಡಾ ವರ್ತನೆ:
ದೊಣ್ಣೆಗಳು, ಇಟ್ಟಿಗೆಗಳು ಮತ್ತು ರಾಡ್‌ಗಳನ್ನು ಹೊತ್ತ ದುಷ್ಕರ್ಮಿಗಳು, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಅದರ ಶುಶ್ರೂಷ ಕೇಂದ್ರ ಮತ್ತು ಔಷಧಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ, ಜೊತೆಗೆ ಉತ್ತರ ಕೋಲ್ಕತ್ತಾದ ಆಸ್ಪತ್ರೆಯಲ್ಲಿನ ಹೊರ ರೋಗಿಗಳ ವಿಭಾಗದ (OPD) ವಿಭಾಗವನ್ನು ಧ್ವಂಸಗೊಳಿಸಿದ್ದಾರೆ. ಸುತ್ತಮುತ್ತಲಿನ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications