ಕೋಲಾರ: ಜೆಡಿಎಸ್ ಟಿಕೆಟ್ ಆಕಾಂಕ್ಷಿಯಿಂದ ಭರ್ಜರಿ ಬಾಡೂಟ
ಕೋಲಾರ, ಫೆಬ್ರವರಿ 28: ಕೊಲಾರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೆ.ಶ್ರೀನಿವಾಸ ಗೌಡ ಅವರು ಮತದಾರರನ್ನು ಸೆಳೆಯಲು ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಕೋಲಾರ ನಗರದ ಎಂಡಿ ಪ್ಲಾಜಾ ಸಭಾಂಗಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಏರ್ಪಡಿಸಿದ್ದ ಶ್ರೀನಿವಾಸಗೌಡ ಅವರು ಸಭೆಯ ನಂತರ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಭರ್ಜರಿ ಬಾಡೂಟ ಹಾಕಿಸಿದರು.
ಮುದ್ದೆ, ಮಟನ್ ಸಾರು, ಬಿರಿಯಾನಿ, ಇನ್ನಿತರೆ ಮಾಂಸಾಹಾರ ಭಕ್ಷ್ಯಗಳ ಬಾಡೂಟ ವ್ಯವಸ್ಥೆಯಿದ್ದ ಬಾಡೂಟ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಮಾಂಸಾಹಾರ ಸವಿದರು.

ಜೆಡಿಎಸ್ ವರಿಷ್ಠರೊಂದಿಗೆ ಮುನಿಸಿನಲ್ಲಿರುವ ಶ್ರೀನಿವಾಸಗೌಡ ಕೋಲಾರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ಸಭೆಗೆ ಬಂದಿದ್ದ ಜೆಡಿಎಸ್ ವೀಕ್ಷಕರ ಮುಖಾಂತರ ವರಿಷ್ಠರ ಮೇಲೆ ಪ್ರಭಾವ ಬೀರುವ ತಂತ್ರದ ಭಾಗವಾಗಿ ಶ್ರೀನಿವಾಸ ಗೌಡ ಅವರು ಈ ಕಾರ್ಯಕ್ರಮ ಆಯೋಜಿಸಿದ್ದರು.
ಕೋಲಾರ ನಗರ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟಿದ್ದು. ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಸ್ಪರ್ಧೆ ಏರ್ಪಟ್ಟಿರುವ ಕಾರಣ ಇತ್ತೀಚೆಗೆ ಬಿಡುಗಡೆ ಆದ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಹೆಸರು ಇರಲಿಲ್ಲ, ಈ ಕ್ಷೇತ್ರದ ಸಮೀಕ್ಷೆ ನಡೆಸಿ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿರುವ ಕಾರಣ ಮತದಾರರು ಮತ್ತು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯಲು ಶ್ರೀನಿವಾಸಗೌಡ ಬಾಡೂಟದ ವ್ಯವಸ್ಥೆ ಮಾಡಿಸಿದ್ದರು.












Click it and Unblock the Notifications