Kodi Shree Predictions: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ!
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಕುರ್ಚಿ ಕಾಳಗ ನಡೆಯುತ್ತಿದೆ. ಇವರಲ್ಲದೆ ಕಾಂಗ್ರೆಸ್‌ನ ಹಲವು ನಾಯಕರು ಕೂಡ ನಾನೇ ಸಿಎಂ ಎನ್ನುತ್ತಿದ್ದಾರೆ. ಈ ಬಗ್ಗೆ ಚರ್ಚೆಗಳು ಜೋರಾಗಿರುವ ಹೊತ್ತಲ್ಲೇ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿ ಶ್ರೀ) ಅವರು ಸಿಎಂ ಬದಲಾವಣೆ ವಿಚಾರದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಧಿಕಾರ ಒಪ್ಪಂದವಾಗಿದೆ ಎನ್ನುವ ಚರ್ಚೆ ಮುನ್ನೆಗೆ ಬಂದಿತ್ತು. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಸಂದರ್ಶನದಲ್ಲಿ ಬಾಯ್ಬಿಟ್ಟು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅಧಿಕಾರವಧಿಯಲ್ಲಿ ಸಿದ್ದರಾಮಯ್ಯ ಅರ್ಧ ಅಧಿಕಾರ ನಡೆಸಿದರೆ, ಇನ್ನುಳಿದ ಅಧಿಕಾರವಧಿಗೆ ಡಿಕೆಶಿ ಸಿಎಂ ಆಗಲಿದ್ದಾರೆ ಎನ್ನುವ ಮಾತೂ ಇದೆ. ಈ ಬಗ್ಗೆ ಕೋಡಿ ಶ್ರೀಗಳು ನುಡಿದಿರುವ ಭವಿಷ್ಯವಾಣಿ ಅಚ್ಚರಿ ಮೂಡಿಸಿದೆ.

"ಹಾಲು ಕೆಟ್ಟರೂ, ಹಾಲಮತ ಸಮಾಜ ಕೆಡುವುದಿಲ್ಲ ಎಂಬ ಮಾತಿದೆ. ಅದೇ ರೀತಿ ಈಗ ಹಾಲಮತ ಸಮಾಜದವರ ಕೈಯಲ್ಲೇ ರಾಜ್ಯದ ಅಧಿಕಾರವಿದೆ. ಹಾಗಾಗಿ ಅಧಿಕಾರವನ್ನು ಅವರಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಅವರಾಗಿಯೇ ಅಧಿಕಾರ ಬಿಡಬೇಕು. ಅವರಿಂದ ಅಧಿಕಾರ ಪಡೆಯುವುದು ಅಷ್ಟು ಸುಲಭವಲ್ಲ, ಮುಂದೆ ಏನೆಲ್ಲ ಆಗುತ್ತದೆ ಎಂದು ಯುಗಾದಿ ಬಳಿಕ ಭವಿಷ್ಯ ಹೇಳುತ್ತೇನೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೋಡಿಶ್ರೀಗಳ ಭವಿಷ್ಯದ ಪ್ರಕಾರ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸದ್ಯಕ್ಕೆ ಸುಲಭವಾದ ಮಾತಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಡ ನಡೆಯುವ ಲಕ್ಷಣಗಳಿಲ್ಲ. ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಸಾಧ್ಯವಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ತಾನಾಗಿಯೇ ಅಧಿಕಾರವನ್ನು ಬಿಡಬೇಕು. ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ ಎಂದು ಪರೋಕ್ಷವಾಗಿ ತಮ್ಮ ಭವಿಷ್ಯವಾಣಿ ಮೂಲಕ ತಿಳಿಸಿದ್ದಾರೆ.

ಯುಗಾದಿ ಬಳಿಕ ಕಂಟಕ!
ಯುಗಾದಿ ಹಬ್ಬದ ಬಳಿಕ ಜಗತ್ತಿನಲ್ಲಿ ಹಲವು ಬದಲಾವಣೆಗಳು ನಡೆಯಲಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಭೀಕರವಾಗಿರುತ್ತೆ. ಭೂಕಂಪನ, ಸಾವು ನೋವು, ಕಟ್ಟಡಗಳು ಉರುಳುವುದು, ಸುನಾಮಿ ಸೇರಿ ಭೀಕರ ಘಟನೆಗಳಿಗೆ ಸಾಕ್ಷಿಯಾಗಲಿವೆ. ಈವರೆಗೆ ಜಲ ಸುನಾಮಿ ಆಗುತ್ತಿತ್ತು, ಈ ಸಲ ಭೂಸುನಾಮಿ ಸಂಭವಿಸಲಿದೆ. ಬಾಹ್ಯಾಕಾಶದಲ್ಲೂ ಸುನಾಮಿ ಆಗಲಿದ್ದು, ಈ ಎಲ್ಲದರ ಬಗ್ಗೆ ಯುಗಾದಿ ಬಳಿಕ ಮತ್ತೆ ಹೇಳುತ್ತೇನೆ ಎಂದಿದ್ದಾರೆ.
ಸಂಕ್ರಾಂತಿ ಭವಿಷ್ಯವು ರಾಜ ಮಹಾರಾಜರಿಗೆ ಹಾಗೂ ದೊಡ್ಡ ವ್ಯಾಪಾರಸ್ಥರಿಗೆ ಒಳ್ಳೆಯದಾಗುತ್ತೆ. ಬಳಿಕ ಚಂದ್ರಮಾನ ಯುಗಾದಿ ಬರುತ್ತೆ. ಚಂದ್ರನನ್ನ ಆಧಾರವಾಗಿಟ್ಟುಕೊಂಡು ಮಳೆ, ಬೆಳೆ, ಅವಘಡಗಳು, ಸುಖ ದುಃಖಗಳು ಸೇರಿ ಈ ವಿಷಯಗಳ ಮೇಲೆ ಯುಗಾದಿ ಭವಿಷ್ಯ ಹೇಳಲಾಗುತ್ತೆ. ಯುಗಾದಿ ಹಬ್ಬ ಇನ್ನೊಂದು ತಿಂಗಳಲ್ಲಿ ಬರಲಿದೆ. ಹಾಗಾಗಿ ಅದರ ಮೇಲೆ ಈಗಲೇ ಭವಿಷ್ಯ ಹೇಳೋದು ಕಷ್ಟ. ಈಗಿರುವ ಲಕ್ಷಣಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಯಾವುದೇ ತೊಂದರೆಗಳಿಲ್ಲ. ಈ ವರ್ಷ ರಾಜ್ಯದಲ್ಲಿ ಮಳೆ ಬೆಳೆ ಉತ್ತಮವಾಗಿರಲಿದ್ದು, ಯಾವುದೇ ತೊಂದರೆಗಳಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications