ಗುಂಡಿನ ದಾಳಿ ಪ್ರಕರಣ, ಶುಕ್ರವಾರ ಕೊಡಗು ಬಂದ್

ಘಟನೆ ನಡೆದದ್ದು ಹೇಗೆ : ವಿರಾಜಪೇಟೆಯ ಗಾಂಧಿನಗರದ ನಿವಾಸಿಯೊಬ್ಬರ 14 ಸೆಂಟ್ ಜಾಗದ ನೋಂದಣಿ ಸಂಬಂಧ ಸುಜಾ ಕುಶಾಲಪ್ಪ, ವಕೀಲ ಮಾಚಯ್ಯ ಹಾಗೂ ಸುಜಾ ಅವರ ಪುತ್ರ ಶಶಾಂಕ್ ಭೀಮಯ್ಯ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಜೀವನ್ ಅವರೊಂದಿಗೆ ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿ ತೆರಳಿದ್ದರು.
ಗುರುವಾರ ಸಂಜೆ 4.15ರ ಸುಮಾರಿಗೆ ಕಚೇರಿಯಿಂದ ಹೊರ ಬಂದು ಅವರು ತಮ್ಮ ಕಾರಿನತ್ತ ತೆರಳುತ್ತಿದ್ದಾಗ ಹತ್ತಿರದಲ್ಲಿದ್ದ ಮಾರುತಿ ಆಲ್ಟೋ ಕಾರಿನಿಂದ ದುಷ್ಕರ್ಮಿಗಳು ಸುಜಾ ಮೇಲೆ ಗುಂಡಿನ ದಾಳಿ ನಡೆಸಿ, ಕಾರಿನಲ್ಲಿ ಪರಾರಿಯಾಗಿದ್ದಾರೆ.
ಗುಂಡು ಸುಜಾ ಅವರ ಕುತ್ತಿಗೆಗೆ ಗುಂಡುಗಳು ತಗುಲಿದ್ದು, ಅವರನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತರಲಾಯಿತು. ಗುಂಡಿನ ದಾಳಿ ನಡೆದ ವಿಚಾರ ಹಬ್ಬುತ್ತಿದ್ದಂತೆ, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿರಾಜಪೇಟೆ ಪಟ್ಟಣದಲ್ಲಿ ಸಂಜೆಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಕೊಡಗು ಬಂದ್ : ಸುಜಾ ಕುಶಾಲಪ್ಪ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಶುಕ್ರವಾರ ಕೊಡಗು ಬಂದ್‌ಗೆ ಕರೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮನು ಮುತ್ತಪ್ಪ, ಸುಜಾ ಕುಶಾಲಪ್ಪ ಅವರ ಮೇಲೆ ದಾಳಿ ನಡೆದಿರುವುದು ಹೇಯ ಕೃತ್ಯವಾಗಿದ್ದು, ಜಿಲ್ಲೆ ಗೂಂಡಾ ರಾಜ್ಯವಾಗಿದೆ. ಇದನ್ನು ಪ್ರತಿಭಟಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಕೊಡಗು ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾಹಿತ್ಯಾಸಕ್ತರಿಗೆ ಅಭಯ : ಕೊಡಗು ಜಿಲ್ಲೆಯ ವರ್ತಕರು, ಬಸ್, ವಾಹನ ಮಾಲೀಕರು ಬಂದ್ ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 80ನೇ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರು ಆತಂಕ ಪಡುವ ಅಗತ್ಯವಿಲ್ಲ. ಮಡಿಕೇರಿಯಿಂದ ಮೈಸೂರು, ಮಂಗಳೂರು, ಹಾಸನ ಕಡೆಗೆ ಹೋಗಲು ಎಲ್ಲರಿಗೂ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮನು ಮುತ್ತಪ್ಪ ಹೇಳಿದ್ದಾರೆ. [ಸಾಹಿತ್ಯ ಸಮ್ಮೇಳನದ ನಿರ್ಣಯಗಳು]












Click it and Unblock the Notifications