ಸಿದ್ದರಾಮಯ್ಯ ಮೊದಲಿನಂತಿಲ್ಲ, ಅವರ ಮೇಲೆ ಒತ್ತಡ ಇದೆ: ಕೆ.ಎನ್.ರಾಜಣ್ಣ ಹೀಗಂದಿದ್ದೇಕೆ?
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಹೈಕಮಾಂಡ್ ಕೋಪಕ್ಕೆ ಗುರಿಯಾಗಿ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡರು. ಆದರೆ ಸಿದ್ದರಾಮಯ್ಯ ಅವರು ತನ್ನ ಆಪ್ತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಮಾತುಗಳು ಕೇಳಿಬಂದವು. ಇದೀಗ ರಾಜಣ್ಣ ಅವರ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮೊದಲಿನಂತೆ ಈಗಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ಬಾಂಬ್ ಸಿಡಿಸಿ, ಪಕ್ಷಕ್ಕೆ ಮುಜುಗರ ತಂದಿದ್ದರು. ಇದರಿಂದ ಹೈಕಮಾಂಡ್ ನಾಯಕರು ಗರಂ ಕೂಡ ಆಗಿದ್ರು. ಬಳಿಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಮತಗಳ್ಳತನ ಅಭಿಯಾನದ ಬಗ್ಗೆ ಪಕ್ಷದ ವಿರುದ್ಧವೇ ರಾಜಣ್ಣ ನೀಡಿದ್ದ ಹೇಳಿಕೆಯು ಮತ್ತಷ್ಟು ಕೋಪಕ್ಕೆ ಕಾರಣವಾಗಿತ್ತು. ಈ ಎರಡೂ ಕಾರಣದಿಂದಾಗಿ ಹೈಕಮಾಂಡ್ ರಾಜಣ್ಣನವರ ಮೇಲೆ ಶಿಸ್ತುಕ್ರಮ ತೆಗೆದುಕೊಂಡಿತ್ತು. ನಂತರ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ಆಪ್ತರಾದ ಸಿದ್ದರಾಮಯ್ಯ ಅವರು ರಾಜಣ್ಣನ ಪರ ನಿಲ್ಲಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಹೇಳಿಕೊಳ್ಳಲಾಗದ ಒತ್ತಡ ಇದೆ
ಇಂದು ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನಾವೆಲ್ಲ ನಿಜವಾಗಿ ಅಭಿನಂದನೆ ಸಲ್ಲಿಸಬೇಕು. ಮೊದಲಿನ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದರಾಮಯ್ಯ ಬೇರೆ. ಆಗ ಪಾದರಸದಂತೆ ಕೆಲಸ ಮಾಡುತ್ತಿದ್ರು. ಈಗ ಅವರ ಮೇಲೆ ಯಾರ ಕಡೆಯಿಂದ ಯಾವ ಒತ್ತಡ ಇದೆಯೋ ಗೊತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಅವರಿಗೆ ಬೇರೆ ಬೇರೆ ರೀತಿಯ ಒತ್ತಡಗಳಿದ್ದಾವೆ. ಕೆಲವು ಹೇಳಿಕೊಳ್ಳುವಂತಹ ಒತ್ತಡಗಳಾದ್ರೆ, ಕೆಲವು ಹೇಳಿಕೊಳ್ಳಲಾಗದ ಒತ್ತಡಗಳೂ ಇವೆ ಎಂದು ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮನೆ ನಾಯಿಗೂ ಅನ್ನ ಹಾಕ್ತೀವಿ
ಅದೇನೇ ಆಗಲಿ ಸಿದ್ದರಾಮಯ್ಯ ಅವರ ಒಂದೇ ಒಂದು ಪುಣ್ಯದ ಕೆಲಸ ಅಂದ್ರೆ ಅನ್ನಭಾಗ್ಯ ಕಾರ್ಯಕ್ರಮ. ಮಧ್ಯಮ ವರ್ಗದವರಿಗೆ ಅನ್ನಭಾಗ್ಯದ ಮಹತ್ವ ಗೊತ್ತಿದೆ. ಹಿಂದಿನ ಕಾಲದವರಿಗೆ ಅನ್ನದ ಮಹತ್ವ ಚೆನ್ನಾಗಿ ಗೊತ್ತು. ಮೊದಲು ಹಬ್ಬದಲ್ಲಿ ಮಾತ್ರವೇ ಅನ್ನ ಮಾಡ್ತಿದ್ರು, ಬೇರೆ ಸಂದರ್ಭದಲ್ಲಿ ಅನ್ನ ಮಾಡುತ್ತಿರಲಿಲ್ಲ ಅಂತಿದ್ರು. ಮೊದಲು ಭತ್ತ ಬೆಳೆಯುವವರ ಮನೆಯಲ್ಲಿ ಮಾತ್ರ ಅನ್ನ ಮಾಡ್ತಿದ್ರು. ಮನೆಗೆ ಯಾರಾದ್ರೂ ನೆಂಟರು ಬಂದರಷ್ಟೇ ಅನ್ನ ಮಾಡ್ತಿದ್ರು. ಇಂದಿನ ಜನರಿಗೆ ಅನ್ನ ಅನ್ನೋದು ಬಹಳ ಸಸ್ತಾ ಆಗೋಗಿದೆ. ಈಗ ಬೆಳಿಗ್ಗೆ ಟಿಫನ್‌ಗೆ, ಮಧ್ಯಾಹ್ನ ರಾತ್ರಿ ಊಟಕ್ಕೂ ಅನ್ನ ಮಾಡ್ತೀವಿ. ನಮ್ಮನೆ ನಾಯಿಗೂ ಅನ್ನ ಹಾಕ್ತೀವಿ ಅಂತಾರೆ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.












Click it and Unblock the Notifications