Tirupati laddus: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಪೂರೈಕೆ- ಟಿಟಿಡಿಯನ್ನು ಚರ್ಚೆಗೆ ಆಹ್ವಾನಿಸಿದ ಕೆಎಂಎಫ್
ಬೆಂಗಳೂರು, ಆಗಸ್ಟ್ 03: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದೆ. ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪವನ್ನು ಪೂರೈಸುವ ಕುರಿತು ಚರ್ಚೆಗೆ ಬರುವಂತೆ ಕೆಎಂಎಫ್ ಆಹ್ವಾನಿಸಿದೆ.
ತಿರುಪತಿ ಲಡ್ಡುಗಳಿಗೆ ತುಪ್ಪ ಪೂರೈಕೆ ಸ್ಥಗಿತಗೊಳಿಸಿದ್ದಕ್ಕೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಟೀಕಿಸಿತ್ತು. ಬಳಿಕ ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.

ಸ್ಪರ್ಧಾತ್ಮಕ ಬೆಲೆಗಳಿಂದಾಗಿ ಟಿಟಿಡಿಗೆ ತುಪ್ಪವನ್ನು ಪೂರೈಸಲು ಸಾಧ್ಯವಿಲ್ಲ ಎಂದು ಕೆಎಂಎಫ್ ಮುಖ್ಯಸ್ಥ ಭೀಮಾ ನಾಯ್ಕ್ ಹೇಳಿದ್ದರು.
ನಂದಿನಿ ತುಪ್ಪವು ಉತ್ತಮ ಗುಣಮಟ್ಟದ್ದಾಗಿದೆ. ಟಿಟಿಡಿ ಬೇರೆ ತುಪ್ಪವನ್ನು ಬಳಸಲು ಆದ್ಯತೆ ನೀಡಿದರೆ ಲಡ್ಡುವಿನ ಗುಣಮಟ್ಟ ಇದೇ ರೀತಿಯಾಗಿ ಇರುವುದಿಲ್ಲ ಎಂದು ಕೆಎಂಎಫ್ ಮುಖ್ಯಸ್ಥರು ಹೇಳಿದ್ದರು.
ತುಪ್ಪ ಸರಬರಾಜು ಮಾಡಲು ಟಿಟಿಡಿ ಟೆಂಡರ್ ಕರೆದಿತ್ತು. ಕಡಿಮೆ ಬೆಲೆಗೆ ಬಿಡ್ ಮಾಡಿದ ಕಂಪನಿ ಜೊತೆ ಟಿಟಿಡಿ ಒಪ್ಪಂದ ಮಾಡಿಕೊಂಡಿತ್ತು. ನಂದಿನಿ ತುಪ್ಪದ ಬೆಲೆ ಹೆಚ್ಚಿರುವುದರಿಂದ ಟಿಟಿಡಿ ಒಪ್ಪಂದವನ್ನು ಮುರಿದುಕೊಂಡಿತ್ತು.

ಉತ್ಪಾದನಾ ವೆಚ್ಚವನ್ನು ಮರುಪಡೆಯಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಟಿಟಿಡಿಗೆ ಬರೆದ ಪತ್ರದಲ್ಲಿ ಕೆಎಂಎಫ್ ಹೇಳಿದೆ.
'ಇತ್ತೀಚಿಗೆ ಟೆಂಡರ್‌ಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಬಿಡ್ಡಿಂಗ್‌ಗಳನ್ನು ಮಾಡಲಾಗುತ್ತದೆ. ಕಡಿಮೆ ಬೆಲೆಗೆ ತುಪ್ಪವನ್ನು ನೀಡಲು ಕಂಪನಿಗಳು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಟಿಟಿಡಿಗೆ ತುಪ್ಪವನ್ನು ಪೂರೈಸಲು ಸಾಧ್ಯವಾಗಲಿಲ್ಲ' ಎಂದು ಕೆಎಂಎಫ್ ತಿಳಿಸಿದೆ.
ಕೆಎಂಎಫ್ ಸಹಕಾರಿ ರೈತ ಸಂಘಟನೆಯಾಗಿರುವುದರಿಂದ ತುಪ್ಪದ ಉತ್ಪಾದನಾ ವೆಚ್ಚವನ್ನು ಮರುಪಡೆಯಲು ಕಷ್ಟವಾಗುತ್ತದೆ. ಟೆಂಡರ್‌ಗಳಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಹೋಗಲು ಸಾಧ್ಯವಿಲ್ಲ. ನಮ್ಮ ದರಗಳು ಅಧಿಕವಾಗಿದೆ ಎಂದು ಕೆಎಂಎಫ್ ಪತ್ರದಲ್ಲಿ ಬರೆಯಲಾಗಿದೆ.

ಈಗ ಕೆಎಂಎಫ್ ಟಿಟಿಡಿಯನ್ನು ಮಾತುಕತೆಗೆ ಕರೆದಿದೆ.
'ಸಭೆಯ ದಿನಾಂಕ ಮತ್ತು ಸಮಯವನ್ನು ಒದಗಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಈ ಮಾತುಕತೆಯಲ್ಲಿ ನಾವು ದರಗಳು ಮತ್ತು ಸರಬರಾಜು ವೆಚ್ಚಗಳ ಬಗ್ಗೆ ಪರಸ್ಪರ ಒಪ್ಪಂದಕ್ಕೆ ಬರಬಹುದು' ಎಂದು ಟಿಟಿಡಿಗೆ ಕೆಎಂಎಫ್ ಪತ್ರವನ್ನು ಬರೆದಿದೆ.
ಕೆಎಂಎಫ್ ಸ್ಪಷ್ಟನೆ
ತಿರುಪತಿ ಲಡ್ಡು ತಯಾರಿಕೆಗೆ ಕೆಎಂಎಫ್ ತುಪ್ಪ ಪೂರೈಕೆಯನ್ನು ನಿಲ್ಲಿಸಿರುವ ಕುರಿತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಇವಿ ಧರ್ಮ ರೆಡ್ಡಿ ಮಂಗಳವಾರ ಬೆಳಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಟಿಟಿಡಿ ಇಒ ಧರ್ಮಾ ರೆಡ್ಡಿ, 'ತುಪ್ಪ ಪೂರೈಕೆ ಮಾಡಲು ಟಿಟಿಡಿ ಅನುಮತಿ ನೀಡಿಲ್ಲ ಎಂದು ಅವರು (ಕೆಎಂಎಫ್‌ಒ ಅಧ್ಯಕ್ಷ) ಆರೋಪ ಮಾಡುತ್ತಿದ್ದಾರೆ. ಕೆಎಂಎಫ್‌ಒ ಅಧ್ಯಕ್ಷರ ಹೇಳಿಕೆ ಸರಿಯಲ್ಲ' ಎಂದು ಹೇಳಿದ್ದಾರೆ.
ಇ-ಟೆಂಡರ್ ಆಗಿರುವುದರಿಂದ ಭಾರತದಾದ್ಯಂತ ಅರ್ಹ ಪೂರೈಕೆದಾರರನ್ನು ಆಹ್ವಾನಿಸಲಾಗಿತ್ತು. ಇ-ಟೆಂಡರ್ ಪ್ರಕ್ರಿಯೆಯ ಮೂಲಕ ಟಿಟಿಡಿ ತುಪ್ಪ ಸೇರಿದಂತೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಂಗ್ರಹಿಸುತ್ತದೆ. ಕಡಿಮೆ ದರದ ವಸ್ತುಗಳ ಪೂರೈಕೆದಾರರ ಜೊತೆ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications