Kannada Language: ಕೇರಳ ಹೈಕೋರ್ಟ್ ಆದೇಶಕ್ಕೆ ಸಚಿವ ಹರ್ಷ
ಬೆಂಗಳೂರು, ಆಗಸ್ಟ್ 25: ಗಡಿನಾಡು ಕಾಸರಗೋಡು ಜಿಲ್ಲೆಯ ಅಡೂರು ಕನ್ನಡ ಶಾಲೆಗೆ ಮಲೆಯಾಳಿ ಭಾಷಿಕ ಶಿಕ್ಷಕರಿರುವ ಸ್ಥಾನಕ್ಕೆ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಇದು ಸಂತಸದಾಯಕ ವಿಚಾರವಾಗಿದೆ. ಈ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಮತ್ತಷ್ಟು ಬಲಗೊಂಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಕರ್ನಾಟಕದ ಗಡಿನಾಡು ಭಾಗದ ಕಾಸರಗೋಡಿನ ಅಡೂರು ಶಾಲೆಗೆ ಮಲೆಯಾಳ ಶಿಕ್ಷಕಿ ನೇಮಕದಿಂದಾಗಿ ಕಳೆದ ವರ್ಷ ಉದುಮ ಮತ್ತು ಹೊಸಕೋಟೆ ಸರ್ಕಾರಿ ಪ್ರೌಢಶಾಲೆಗಳ ಕನ್ನಡ ವಿಭಾಗಗಳಿಗೆ ಮಲಯಾಳ ಭಾಷೆ ಮಾತ್ರ ತಿಳಿದಿರುವ ಸಮಾಜ ವಿಜ್ಞಾನ ಶಿಕ್ಷಕರನ್ನು ನೇಮಿಸಲಾಗಿತ್ತು.

ಉದುಮ ಪ್ರೌಢಶಾಲೆಗೆ ಕೂಡ ಇದೇ ರೀತಿ ಶಿಕ್ಷಕಿ ನೇಮಕಗೊಂಡಿದ್ದರು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಗಡಿನಾಡಿನ ಕನ್ನಡ ಹೋರಾಟಗಾರರು ಸೇರಿ ಪ್ರತಿಭಟನೆ ನಡೆಸಿದ್ದರು. ಜೊತೆಗೆ ಈ ಕುರಿತು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕನ್ನಡಿಗರ ಹೋರಾಟಕ್ಕೆ ಜಯ
ಇದೀಗ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿರುವುದು ಗಡಿನಾಡ ಕನ್ನಡಿಗರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ಕೇರಳ ಹೈಕೋರ್ಟ್‌ನಲ್ಲಿ ಮಹತ್ವದ ಜಯ ಲಭಿಸಿದೆ. ಸಮಸ್ತ ಕನ್ನಡಿಗರಿಗೆ ಸಂತೋಷ ತಂದಿದೆ ,ಮಲಯಾಳಿ ಭಾಷಿಕ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಅರ್ಥೈಸಿಕೊಂಡಿರುವ ನ್ಯಾಯಾಲಯ, ಕೂಡಲೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಮಾತೃ ಭಾಷಾ ಶಿಕ್ಷಣದ ವಾದಕ್ಕೆ ಕಾನೂನು ಮಾನ್ಯತೆ ದೊರೆತಂತಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಬಹುಕಾಲದಿಂದಲೂ ಈ ಭಾಗದಲ್ಲಿ ಕನ್ನಡ ವಿರೋಧಿ ನೀತಿ ತಾಳಲಾಗಿದೆ. ಸದ್ಯ ಕೇರಳ ರಾಜ್ಯ ಹೈಕೋರ್ಟ್ ನೀಡಿರುವ ಈ ಆದೇಶದಿಂದ ಗಡಿನಾಡು ಭಾಗದಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ಬಲ ದೊರೆತಿದೆ. ಮುಖ್ಯವಾಗಿ ಆದೇಶದಿಂದ ಕನ್ನಡ ವಿರುದ್ಧದ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರಕ್ಕೆ, ಶಿಕ್ಷಣ ಇಲಾಖೆ, ಕೇರಳ ಲೋಕಸೇವಾ ಆಯೋಗಕ್ಕೆ ಚಾಟಿ ಬೀಸಿದಂತಾಗಿದೆ.












Click it and Unblock the Notifications