KEA: PGNEET ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ
ಬೆಂಗಳೂರು, ಜುಲೈ 15: ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGNEET 2025) ಬರೆದು ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್ ನ್ಯೂಸ್ ನೀಡಿದೆ. ಎಂಡಿಎಸ್ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGNEET 2025) ಅರ್ಹ ಅಭ್ಯರ್ಥಿಗಳು ಬಯಸಿದ್ದ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣದಲ್ಲಿ https://cetonline.karnataka.gov.in/kea/ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಗಮನಿಸುವಂತೆ ಅವರು ತಿಳಿಸಿದ್ದಾರೆ.

ಒಟ್ಟು 889 ಎಂಡಿಎಸ್ ಸೀಟು ಲಭ್ಯ ಇವೆ. ಮೊದಲ ಸುತ್ತಿನಲ್ಲಿ 636 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಆಗಿದೆ. ಒಟ್ಟು 1,400 ಮಂದಿ ಸೀಟು ಪಡೆಯಲು ಅರ್ಜಿ ಸಲ್ಲಿಸಿದ್ದರು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮಗೆ ಸೂಕ್ತ ಅನಿಸಿದರೆ ಛಾಯ್ಸ್ -1 ಅನ್ನು ಆಯ್ಕೆ ಮಾಡಿಕೊಂಡು ಕಾಲೇಜಿಗೆ ಪ್ರವೇಶ ಪಡೆಯಬಹುದು. ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಮಂಗಳವಾರ (ಜುಲೈ 15) ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.
ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿ (UGNEET 2025) ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಇದುವರೆಗೂ ನೋಂದಣಿ ಮಾಡದಿರುವವರಿಗೆ ಅನುಕೂಲವಾಗಲಿ ಎಂದು ಜುಲೈ 17ರವರೆಗೆ ಅರ್ಜಿ ಅಲ್ಲಿಸಲು ಅವಕಾಶ ನೀಡಲಾಗಿದೆ. ಹೊಸದಾಗಿ ನೋಂದಣಿ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದು. ಹಾಗೆಯೇ ನೀಟ್ ರೋಲ್ ನಂಬರ್ ದಾಖಲಿಸುವವರಿಗೂ ಜುಲೈ 17 ರವರೆಗೆ ಅವಕಾಶ ನೀಡಲಾಗಿದೆ.
ಈ ಹಿಂದೆ ಸೀಟು ಹಂಚಿಕೆ ಆಪ್ಷನ್ ದಾಖಲಿಸಲು ಜುಲೈ 15ರವರೆಗೆ ಸಮಯ ನೀಡಿದ್ದು, ಅದು ಇಂದಿಗೆ ಮುಗಿಯಲಿದೆ. ನೀಟ್ ರೋಲ್ ಸಂಖ್ಯೆ ದಾಖಲಿಸಲು ಮೊದಲು ಜುಲೈ 08ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಜುಲೈ 17 ರವರೆಗೆ ದಾಖಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಎಲ್ಲ ಅಭ್ಯರ್ಥಿಗಳು ಲಿಂಕ್ ಮೂಲಕ ಕೆಇಎ ಸೂಚನೆ ಪಾಲಿಸುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ ಆ ಸಮಸ್ಯೆಗೆ ಕೊನೆಗೊಂಡಿದೆ. ಹೀಗಾಗಿ ಒಂದಷ್ಟು ಅವಧಿ ವಿಸ್ತರಣೆ ಮಾಡಲಾಗಿದೆ. ಅಣಕು ಫಲಿತಾಂಶ, ಇತರ ಸುತ್ತುಗಳ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಬಾಕಿ ಇದೆ.












Click it and Unblock the Notifications