ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ FDA, SDA ಸೇರಿ ಒಟ್ಟು 5,431 ಹುದ್ದೆಗಳಿಗೆ ಒಂದೇ ಪರೀಕ್ಷೆ, KEA ಹೊಸ ನಿಯಮ
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ಲಕ್ಷಾಂತರ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಇದುವರೆಗೂ ವಿವಿಧ ಇಲಾಖೆಗಳ ಸಮಾನಾಂತರ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆಗಳನ್ನು ಬರೆದು ಹೈರಾಣಾಗುತ್ತಿದ್ದ ಅಭ್ಯರ್ಥಿಗಳ ಆರ್ಥಿಕ ಹಾಗೂ ಮಾನಸಿಕ ಹೊರೆ ತಪ್ಪಿಸಲು ಕೆಇಎ ಮಹತ್ವದ ಹೆಜ್ಜೆಯಿಟ್ಟಿದೆ.
ಹೌದು, ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಹಾಗೂ ಇತರೆ ಸಮಾನಾಂತರ ಹುದ್ದೆಗಳು ಸೇರಿದಂತೆ ಒಟ್ಟು 5,431 ಹುದ್ದೆಗಳ ನೇಮಕಾತಿಗೆ ಶುಕ್ರವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಒಂದೇ ನೇಮಕಾತಿ ಪರೀಕ್ಷೆಯ ನೂತನ ಉಪಕ್ರಮವನ್ನ ಅಳವಡಿಸಿಕೊಳ್ಳಲಾಗಿದೆ.

ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ
ಇದುವರೆಗೂ ಬಹುತೇಕ ನೇಮಕಾತಿಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕವೇ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರವು ಕೆಇಎಗೂ ನೇಮಕಾತಿ ಪ್ರಾಧಿಕಾರದ ಮಾನ್ಯತೆಯನ್ನ ನೀಡಿದೆ. ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ಅರ್ಹತೆ ಒಂದೇ ಆಗಿರುವ 33 ವಿವಿಧ ಇಲಾಖೆಗಳ ಸಮಾನಾಂತರ ಹುದ್ದೆಗಳಿಗೆ ಒಮ್ಮೆಗೆ ಪರೀಕ್ಷೆ ನಡೆಸಲು ಕೆಇಎ ನಿರ್ಧರಿಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಹಿಂದೆಲ್ಲ ಪ್ರತಿ ಇಲಾಖೆಯ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆ, ಪ್ರತ್ಯೇಕ ಅರ್ಜಿ ಹಾಗೂ ಶುಲ್ಕ ಪಾವತಿಸಬೇಕಿತ್ತು. ಇದರಿಂದ ವಿಳಂಬದ ಜೊತೆಗೆ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆಯೂ ಆಗುತ್ತಿತ್ತು. ಇದೀಗ ಒಂದೇ ಅರ್ಜಿ ಮತ್ತು ಒಂದೇ ಶುಲ್ಕದ ಮೂಲಕ ಎಲ್ಲ ಇಲಾಖೆಗಳ ಹುದ್ದೆಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ.
ಸಿಇಟಿ ಮಾದರಿ ಕೌನ್ಸೆಲಿಂಗ್ ಮೂಲಕ ಹುದ್ದೆ ಹಂಚಿಕೆ
ಈ ನೂತನ ವ್ಯವಸ್ಥೆಯ ವಿಶೇಷ ಎಂದರೆ ಸಿಇಟಿ ಮಾದರಿಯ ಕೌನ್ಸೆಲಿಂಗ್ ಪ್ರಕ್ರಿಯೆ. ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಕಾಲೇಜು ಆಯ್ಕೆಗಾಗಿ ಆದ್ಯತಾ ಕ್ರಮದಲ್ಲಿ ಇಷ್ಟಗಳನ್ನ ದಾಖಲಿಸುವ ಮಾದರಿಯಲ್ಲೇ, ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ನೀಡಲಾಗುತ್ತಿದೆ. ಅಭ್ಯರ್ಥಿಗಳು ಪರೀಕ್ಷೆ ಬರೆದ ಬಳಿಕ, ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ತಮಗೆ ಬೇಕಾದ ಇಲಾಖೆ ಮತ್ತು ಹುದ್ದೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
ಮೆರಿಟ್ ಆಧಾರದ ಮೇಲೆ ಒಬ್ಬ ಅಭ್ಯರ್ಥಿಗೆ ಒಂದು ಹುದ್ದೆ ಹಂಚಿಕೆಯಾಗಲಿದೆ. ಇದರಿಂದ ಪಾರದರ್ಶಕತೆ ಹೆಚ್ಚಲಿದ್ದು, ಗೊಂದಲಗಳಿಗೆ ತೆರೆಬೀಳಲಿದೆ.
ಹಿಂದಿನ ಮಾಹಿತಿ ಬಳಸಿ ಸುಲಭವಾಗಿ ಅರ್ಜಿ ಸಲ್ಲಿಸಿ
ಕೆಇಎ ತನ್ನ ತಂತ್ರಾಂಶವನ್ನೂ ಅಭ್ಯರ್ಥಿಸ್ನೇಹಿಯಾಗಿ ಮೇಲ್ದರ್ಜೆಗೇರಿಸಿದೆ. ಈ ಹಿಂದೆ ಕೆಇಎ ನಡೆಸಿದ ಗ್ರಾಮ ಆಡಳಿತಾಧಿಕಾರಿ, ಭೂಮಾಪಕ, ಕೃಷಿ ಅಧಿಕಾರಿ, ಅಥವಾ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಹೊಸದಾಗಿ ಎಲ್ಲ ವಿವರಗಳನ್ನ ಭರ್ತಿ ಮಾಡುವ ಅಗತ್ಯವಿಲ್ಲ. ಹಳೆಯ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆದರೆ, ಹಿಂದಿನ ಮಾಹಿತಿಯೇ ಎಫ್‌ಡಿಎ, ಎಸ್‌ಡಿಎ ಅರ್ಜಿಯಲ್ಲೂ ಪ್ರತಿಫಲಿಸುತ್ತದೆ.
ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಂಡು, ಕೇವಲ ಶುಲ್ಕ ಪಾವತಿಸಿದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವವರು ಆಧಾರ್ ದೃಢೀಕರಣದ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ವರ್ಷಕ್ಕೆ ಎರಡು ಬಾರಿ ಪರೀಕ್ಷೆ: ಮುಂಬರುವ ನೇಮಕಾತಿಗಳಿಗೆ ಸಿದ್ಧತೆ
ನೇಮಕಾತಿ ಪ್ರಕ್ರಿಯೆಯನ್ನ ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ, ಸಮಾನಾಂತರ ಹುದ್ದೆಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಕೆಇಎ ಚಿಂತನೆ ನಡೆಸಿದೆ. ಉದಾಹರಣೆಗೆ, ಜನವರಿಯಿಂದ ಜೂನ್ ವರೆಗೆ ವಿವಿಧ ಇಲಾಖೆಗಳಿಂದ ಬರುವ ನೇಮಕಾತಿ ಬೇಡಿಕೆಗಳನ್ನ ಒಟ್ಟುಗೂಡಿಸಿ ಒಂದು ಬಾರಿಗೆ ಪರೀಕ್ಷೆ ನಡೆಸುವುದು. ಅದೇ ರೀತಿ, ಜುಲೈನಿಂದ ಡಿಸೆಂಬರ್ ವರೆಗಿನ ಕೋರಿಕೆಗಳಿಗೆ ವರ್ಷಾಂತ್ಯದಲ್ಲಿ ಮತ್ತೊಂದು ಪರೀಕ್ಷೆ ನಡೆಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ.


Click it and Unblock the Notifications
