KCET Exam 2026: ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ
ರಾಜ್ಯಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET Exam 2026) ಇಂದಿನಿಂದ (ಏಪ್ರಿಲ್ 23) ಆರಂಭವಾಗಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದು (ಗುರುವಾರ) ಬೆಳಗಿನ ಅವಧಿಯಲ್ಲಿ ಜೀವಶಾಸ್ತ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಗಣಿತ ಪರೀಕ್ಷೆ ನಡೆಯಲಿದೆ. ಹಾಗೆಯೇ ನಾಳೆ (ಏಪ್ರಿಲ್ 24ರಂದು) ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ನಿನ್ನೆ (ಏಪ್ರಿಲ್ 22) ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳಿಗೆ KEA ಸೂಚನೆಗಳು:
ಪರೀಕ್ಷಾ ಅಕ್ರಮಗಳನ್ನು ತಡೆಯಲು KEA ಈ ಬಾರಿಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
1. ಪ್ರವೇಶ ಪತ್ರ ಕಡ್ಡಾಯ: ಅಭ್ಯರ್ಥಿಗಳು ತಮ್ಮ ಸಿಇಟಿ ಪ್ರವೇಶ ಪತ್ರದ ಜೊತೆಗೆ, ಕಾಲೇಜಿನ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್‌ನಂತಹ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ತರುವುದು ಕಡ್ಡಾಯ.
2. ಸಮಯ ಪಾಲನೆ: ಪರೀಕ್ಷೆ ಆರಂಭವಾಗುವ ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ.
3. ಎಲೆಕ್ಟ್ರಾನಿಕ್ ವಸ್ತುಗಳಿಗೆ ನಿರ್ಬಂಧ: ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ.
4. ವಸ್ತ್ರಸಂಹಿತೆ : ಪರೀಕ್ಷಾ ಪ್ರಾಧಿಕಾರವು ಸೂಚಿಸಿರುವ ವಸ್ತ್ರಸಂಹಿತೆಯನ್ನು ಪಾಲಿಸುವುದು ಕಡ್ಡಾಯ. ಸರಳವಾದ ಉಡುಪುಗಳನ್ನು ಧರಿಸಲು ಸೂಚಿಸಲಾಗಿದ್ದು, ಪೂರ್ಣ ತೋಳಿನ ಶರ್ಟ್, ಟೋಪಿ, ದಪ್ಪನೆಯ ಸೋಲ್ ಇರುವ ಶೂಗಳನ್ನು ಧರಿಸುವಂತಿಲ್ಲ. ಕಿವಿಯೋಲೆ, ಉಂಗುರ, ಕಡಗ ಸೇರಿದಂತೆ ಯಾವುದೇ ಆಭರಣಗಳನ್ನು ಧರಿಸಲು ಅವಕಾಶವಿಲ್ಲ.
5. ನೀಲಿ ಅಥವಾ ಕಪ್ಪು ಪೆನ್: ಒಎಂಆರ್ ಶೀಟ್‌ನಲ್ಲಿ ಉತ್ತರಗಳನ್ನು ಗುರುತಿಸಲು ಕೇವಲ ನೀಲಿ ಅಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸಬೇಕು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ, ಶಾಂತಚಿತ್ತದಿಂದ ಪರೀಕ್ಷೆ ಬರೆಯುವಂತೆ KEA ಹಾಗೂ ಶಿಕ್ಷಣ ಇಲಾಖೆ ಸೂಚಿಸಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಮಹತ್ವದ ಘಟ್ಟವಾಗಿದ್ದು, ಪೋಷಕರು ಕೂಡ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ.












Click it and Unblock the Notifications