ಸಿಎಂ ಸಿದ್ದು ಸಂಪುಟದ ಎರಡು ಸ್ಥಾನ ಭರ್ತಿ!
ಹಾವೇರಿ, ಏ. 29 : ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆಗಳು ನಡೆದಿರುವಾಗಲೇ ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ನಾನು ಸಂಪುಟ ಸೇರುವುದು ಖಚಿತ ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹ ಸಂಪುಟ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಳಿವಾಡ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಮಾಡುತ್ತಾರೆ. ಮೂವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ತಾವು ಸಚಿವ ಸಂಪುಟ ಸೇರುವುದು ಖಚಿತವಾಗಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೋಳಿವಾಡ ಹೇಳಿದರು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರವೂ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು. [ಸಂಪುಟಕ್ಕೆ ಸೇರಲು ಶಾಸಕರ ಲಾಬಿ ಆರಂಭ]
ಕಸರತ್ತು ಆರಂಭ : ಸಿದ್ದರಾಮಯ್ಯ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಅನ್ಯಾಯವಾಗಿದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಶಾಸಕರು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡಲು ದೆಹಲಿಗೆ ತೆರಳುತ್ತಿರುವ ಸುದ್ದಿ ಗುಟ್ಟಾಗಿ ಉಳಿದಿಲ್ಲ.
ಕೆ.ಬಿ.ಕೋಳಿವಾಡ, ಮಾಲಕ ರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಮುಂತಾದ ನಾಯಕರು ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಮೇ.12ರ ನಂತರ ಈ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಆಲೋಚನೆಯಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಸಚಿವಸ್ಥಾನದ ಆಕಾಂಕ್ಷಿಗಳಿಗೆ ಅವರ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನಂತರ ನೋಡೋಣ ಎಂದು ನಾಯಕರು ಹೇಳಿದ್ದರು. ಸದ್ಯ ಮತದಾನ ಮುಗಿದ್ದಿದ್ದರಿಂದ ನಾಯಕರು ಸಚಿವ ಸ್ಥಾನದ ಜಪ ಮಾಡುತ್ತಿದ್ದಾರೆ. ಮೇ 16ರಂದು ಫಲಿತಾಂಶ ಪ್ರಕಟಗೊಂಡ ನಂತರ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಸಿಎಂ ಹೇಳುವುದೇನು : ಲೋಕಸಭೆ ಚುಣಾವಣೆ ಫಲಿತಾಂಶದ ನಂತರ ಸಂಪುಟ ವಿಸ್ತರಣೆ ಮಾಡುವ ಸುಳಿವನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ನೋಡೋಣ. ಫಲಿತಾಂಶ ಬರಲಿ, ಆಮೇಲೆ ಸಂಪುಟ ವಿಸ್ತರಣೆ ವಿಷಯ ಎಂದು ಹೇಳಿದ್ದಾರೆ.












Click it and Unblock the Notifications