Kaveri 2.0: ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ - ಕಂದಾಯ ಇಲಾಖೆಯ ಅಧಿಕಾರಿಗಳು ಲಂಚ ಪಡೆಯುವ ಮಾರ್ಗವೇ ಎಂದ ಆಸ್ತಿದಾರರು
Kaveri 2.0: ಕಾವೇರಿ 2.0: ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ ಎಂದು ಆಸ್ತಿದಾರರು ದೂರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರವಾದ ಚರ್ಚೆ ಶುರುವಾಗಿದೆ. ಹಲವು ಆಸ್ತಿದಾರರು ಕಾವೇರಿ 2.0 ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ.
ಆಸ್ತಿದಾರರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರವು ಕಾವೇರಿ 2.0 ತಂತ್ರಾಂಶವನ್ನು ಪರಿಚಯಿಸಿದೆಯಾದರೂ, ಇದರಲ್ಲಿ ತಾಂತ್ರಿಕ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹಲವು ಆಸ್ತಿದಾರರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಈ ತಂತ್ರಾಂಶವು ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ ಎಂದು ಕುಶಲಜನ ಸುರಚನ ಮಂಡಲದ ಅಧ್ಯಕ್ಷ ಪ್ರಹ್ಲಾದ ಕೆ ಹನುಮಂತಯ್ಯ ಅವರು ಹೇಳಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನನಗೆ ದೇಶ ವಿದೇಶಗಳಲ್ಲಿ 40 ವರ್ಷಗಳ ತಂತ್ರಾಂಶ ಅಭಿವೃದ್ಧಿ ಪಡಿಸಿದ ಅನುಭವವಿದೆ. ತಮಗೂ ಸ್ವಲ್ಪ ತಿಳಿದಿದೆ ಅಂದು ಕೊಂಡಿದ್ದೆ. ಆದರೆ ನಿಮ್ಮ ಇಲಾಖೆಯ ಮಾಡಿರುವ ತಂತ್ರಾಂಶವನ್ನು ಸ್ವಲ್ಪ ಹೊತ್ತು ಬಳಸಿದ ಮೇಲೆ ಗೊತ್ತಾಯಿತು ಎಂಥ ದರಿದ್ರ ಕೆಲಸ ಆಗಿದೆ ಅಂಥ ಎಂದು ಆಕ್ರೋಶ ಹೊರ ಹಾಕಿದ್ದಾರೆ.
1. ಗಣಕೀಕರಣ ಆದ ಮೇಲೆ ಒಂದು ಕೆಲಸ ಸುಲಲಿತವಾಗಬೇಕು. ಆದರೆ ನಿಮ್ಮ ತಂತ್ರಾಂಶದಿಂದ ಕೆಲಸವೇ ಮಾಡಲು ಆಗದು.
2. ನಿಮ್ಮ ಇಲಾಖೆ ಬಳಸಿರುವ ಸ್ಥಳಗಳ ವರ್ಗೀಕರಣ ಬೇರೆ ಇಲಾಖೆಗಳ ವರ್ಗೀಕರಣದೊಂದಿಗೆ ಹೊಂದಾಣಿಕೆ ಇಲ್ಲದೇ ಬಳಸುವುದು ಸಂಕಷ್ಟ.
3. ಮುಂಚೆ ಜನರು ವಿಭಾಗ ಪತ್ರ ಮಾಡಿ, ನೋಂದಣಿ ಮಾಡಿಸಿ ಕೊಟ್ಟಿದ್ದರೇ, ಸ್ಥಳೀಯ ಆಡಳಿತ ಖಾತಾ ಮಾಡಿಕೊಡುತ್ತಿತ್ತು. ಈಗ ವಿಭಾಗ ಪತ್ರಗಳನ್ನು ನೋಂದಣಿ ಮಾಡುತ್ತಿಲ್ಲ. ಬಿಬಿಎಂಪಿ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಹ ಖಾತಾ ಮಾಡಿಕೊಡುತ್ತಿಲ್ಲ. ಏನು ಮಾಡಬೇಕೆಂದು ತೋಚದೇ ಜನರು ತಲೆ ಚೆಚ್ಚಿಕೊಳ್ಳುತ್ತಿದ್ದಾರೆ.
4. ಭಾರತ ಸರ್ಕಾರದ ಆರ್ಥಿಕ ಇಲಾಖೆಗೆ ಆದಾಯ ತೆರಿಗೆ ಪಡೆಯಲು ಉತ್ತಮ ತಂತ್ರಾಂಶ ಮಾಡಲು ಸಾಧ್ಯವಾದರೇ, ನಿಮ್ಮ ಇಲಾಖೆಗೆ ಏಕೆ ಸಾಧ್ಯವಿಲ್ಲ.
5. ಹೊಸ ಪದ್ಧತಿ ಜನರಿಗೆ ನೆಮ್ಮದಿ ನೀಡಬೇಕು, ಹಿಂಸೆ ಕೊಡಬಾರದು ಎನ್ನುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪ್ರಹ್ಲಾದ ಕೆ ಹನುಮಂತಯ್ಯ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಮಸ್ಯೆ ಬಾರಿ ಸ್ಥಳೀಯ ಆಡಳಿತ ಅಥವಾ ಇತರೆ ನಿರ್ದಿಷ್ಟ ನಿಗಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಎರಡು ವರ್ಷಗಳ ಹಿಂದೆ ಖಾತೆಯನ್ನು ಬದಲಿಸಿ ಕೊಟ್ಟಿದ್ದು ಇನ್ನೂ ಆಗಿಲ್ಲ.. ಅಲ್ಲಿನ ಅಧಿಕಾರಿಗಳು ಕೈಚೆಲ್ಲಿ ಕೂತಿದ್ದಾರೆ. ನಮ್ಮ ಗೋಳು ಕೇಳೋರು ಯಾರು ಇಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
Kaveri 2.0: ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವುದಕ್ಕೆ ಈ ಮಾರ್ಗ ?
ಇನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿನ ಲೋಪವನ್ನು ಬಹುಶಃ ಬೇಕಂತಲೇ ಮಾಡಿರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಕೆಟ್ಟ ಸಾಫ್ಟ್‌ವೇರ್ ಹಾಕ್ಕೊಂಡಿದ್ದಾರೆ ಅನ್ಸುತ್ತೆ, ಎಲ್ಲಾ ಸರಿ ಇದ್ದರೆ, ಹೇಗೆ ಹಣ ಲೂಟಿ ಮಾಡಲು ಸಾಧ್ಯ. ಇದು ಬೇಕೆಂತಲೇ ಮಾಡಿರುವ ಕೆಲಸ. ಎಲ್ಲರೂ ಆನ್‌ಲೈನ್ ಮೂಲಕ ಕೆಲಸವನ್ನು ಮಾಡಿಕೊಂಡರೆ, ಸರ್ಕಾರಿ ನೌಕರರಿಗೆ ಕಿಂಬಳ ಬಗೆಯಲು ಹೇಗೆ ಸಾಧ್ಯ, ಆದ್ದರಿಂದಲೇ ಎಲ್ಲರೂ ತಮ್ಮ ಹತ್ತಿರ ಬಂದು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಮಾಡಿರುವ ಈ ದರಿದ್ರ ವ್ಯವಸ್ಥೆ ಸೃಷ್ಟಿಯಾಗಿರುವಂತೆ ಇದೆ ಎಂದು ಹಲವರು ಹೇಳಿದ್ದಾರೆ.












Click it and Unblock the Notifications