ಕಸ್ತೂರಿರಂಗನ್ ವರದಿ ತಿರಸ್ಕಾರ, ಪಶ್ಚಿಮ ಘಟ್ಟದಲ್ಲಿ ಗ್ರಾಮ ಮಟ್ಟದಲ್ಲೂ ಸಮಿತಿ ರಚನೆ: ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕದ ಪ್ರಮುಖ ನೈಸರ್ಗಿಕ ಸಂಪತ್ತು, ಜೀವ ವೈವಿಧ್ಯ ಮತ್ತು ಪರಿಸರ ಸಮತೋಲನದ ಪ್ರದೇಶವಾದ ಪಶ್ಚಿಮ ಘಟ್ಟವನ್ನು ಪರಿಸರ ಸಂರಕ್ಷಿತ ಸೂಕ್ಷ್ಮ ಪ್ರದೇಶವಾಗಿ ಮಾಡಲು ಅಧಿಸೂಚನೆ ಹೊರಡಿಸಿರುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನೀರ್ಣಯಗಳನ್ನು ಕೈಗೊಂಡಿದೆ. ಮುಂದುವರಿದು ರಾಜ್ಯಮಟ್ಟದ ಸಮಿತಿಗೆ ಸಹಾಯ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳು ಇರುವಂತೆ ಸಮಿತಿಗಳನ್ನು ರಚಿಸಲಾಗುವುದು ಎಂದು ರಾಜ್ಯ ಅರಣ್ಯ ಇಲಾಖೆ ಅಧಿಕಾರಿ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಸಚಿವರು ಪತ್ರಿಕಾ ಪ್ರಕಟಣೆ ನೀಡಿದ್ದು, ಇದೇ ವರ್ಷ ಜುಲೈ 27ರಂದು ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಜಾರಿಗಾಗಿ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿತು. ಇದರಿಂದ ಕರ್ನಾಟಕದ ಹತ್ತು ಜಿಲ್ಲೆಗಳ, 1449 ಗ್ರಾಮಗಳನ್ನೊಳಗೊಂಡ ಸುಮಾರು 20,668 ಚ.ಕಿ.ಮೀ ವಿಸ್ತೀರ್ಣ ಪರಿಸರ ಸೂಕ್ಷ್ಮ ಪ್ರದೇಶ (ESA) ಅಡಿಗೆ ಬರುತ್ತದೆ. ಈ ನಿರ್ಧಾರವನ್ನು ಒಪ್ಪದಿರಲು ಮಂಗಳವಾರ ರಾಜ್ಯ ಸರ್ಕಾರ ನಿರ್ಧರಿಸಿದೆ. ಜೊತೆಗೆ ವರದಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಲು ಕೇಂದ್ರಕ್ಕೆ ಪ್ರಮುಖ ಅಂಶಗಳನ್ನು ಒತ್ತಾಯಿಸಲು ಒಕ್ಕೋರಲಿನಿಂದ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾಮ ಮಟ್ಟದಲ್ಲೂ ಸಮಿತಿ: ಸಚಿವರ ಅಪ್ಡೇಟ್
ಸರ್ಕಾರದ ನಿರ್ಧಾರದಲ್ಲಿ ತಜ್ಞರು, ಪರಿಸರವಾದಿಗಳು, ವಿಜ್ಞಾನಿಗಳನ್ನು, ಅರಣ್ಯ ಅಧಿಕಾರಿಗಳು ಹಾಗೂ ಇತರರನ್ನು ಒಳಗೊಂಡು ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ವರದಿಯಲ್ಲಿನ ಲೋಪ ಸರಿಪಡಿಸಿ ಮಾರ್ಪಾಡಿಗೆ ಸೂಚಿಸಲಿದೆ. ಈ ರಾಜ್ಯ ಮಟ್ಟದ ಸಮಿತಿಗೆ ಸಹಕಾರಿಯಾಗುವಂತೆ ಇದೀಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳನ್ನು ಸಹ ರಚಿಸಲು ನಿರ್ಧರಿಸಲಾಗಿದೆ ಎಂದು ಅವರು ಅಪ್ಡೇಟ್ ನೀಡಿದ್ದಾರೆ.
ಮುಂದುವರಿದು, ಜಂಟಿ ಸಮೀಕ್ಷೆ ಮಾಡದೇ ಸ್ಯಾಟ್‌ಲೈಟ್ ಸರ್ವೇ ಮೂಲಕ ಗರಿ ನಿರ್ಧರಿಸಲಾಗಿದೆ. ಈ ವರದಿ ಜಾರಿಯಾದರೆ ಗ್ರಾಮದ ಅರಣ್ಯ ಪ್ರದೇಶದ ಜೊತೆ ಕೃಷಿ ಜಮೀನು, ತೋಟಗಳು, ಮನೆಗಳು ESA ಅಡಿಯಲ್ಲಿ ಸೇರುತ್ತದೆ. ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳು ಬಾಕಿ ಇರುವುದು, ಗ್ರಾಮದ ಐದನೇ ಒಂದು ಭಾಗ (1/5)ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಆಧಾರದಲ್ಲಿ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದರು.
ಈಗಗಲೇ ಮುಖ್ಯಮಂತ್ರಿಗಳು ಶಾಸಕರೊಂದಿಗೆ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಗೆ ಸಂಬಂಧಿಸಿದಂತೆ ಸ್ಥಳೀಯ ಜನರು ವ್ಯಕ್ತಪಡಿಸಿರುವ ಅಹವಾಲುಗಳು, ಆತಂಕಗಳು ಹಾಗೂ ಅಭಿಪ್ರಾಯಗಳನ್ನು ಆಲಿಸಿದ್ದಾರೆ. ಅಲ್ಲದೇ ಈ ಸಂಬಂಧದ ಚರ್ಚೆಗೆ ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲಾಗಿದೆ. ಎಲ್ಲರ ಅಭಿಪ್ರಾಯ ಆಲಿಸಿ ವರದಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ತಿಳಿಸಲಾಗಿದೆ. ಈ ಸಂಬಂಧ ಪ್ರಮುಖ ನೀರ್ಣಯ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಕೈಗೊಂಡ ನಿರ್ಣಯಗಳು
ವರದಿಯಲ್ಲಿ ಅರಣ್ಯ ಪ್ರದೇಶದ ಜೊತೆ ಕೃಷಿ ಜಮೀನು, ತೋಟಗಳು, ಮನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ESA ಅಡಿಯಲ್ಲಿ ಸೇರಿಸಲಾಗಿದೆ. ಇದರಿಂದ, ಮನೆ ನಿರ್ಮಾಣ, ಕುಟುಂಬದ ಆಸ್ತಿ ವಿಭಜನೆ ಮತ್ತು ವಾರಸುದಾರಿಕೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಉದ್ಭವವಾಗುತ್ತವೆ.
ಕರಡು ಅಧಿಸೂಚನೆಯು ಉಪಗ್ರಹ ದತ್ತಾಂಶವನ್ನು (Satellite Data) ಆಧಾರಿತವಾಗಿದೆ. ನಿಖರ ಗಡಿ, ಸರ್ವೇ ನಂಬರ್ ಆಧಾರಿತವಾಗಿರುವುದಿಲ್ಲ. ಜನರಿಗೆ ಪರ್ಯಾಯಜೀವನೋಪಾಯಕ್ಕೆ ವಿಶೇಷ ಆರ್ಥಿಕ ನೆರವು ನೀಡಲು ಯಾವುದೇ ಪ್ರಸ್ತಾಪ ಇರುವುದಿಲ್ಲ. ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳಂತಹ ವಿಷಯಗಳನ್ನು ಪರಿಗಣಿಸಿರುವುದಿಲ್ಲ.
* ಒಂದು ಗ್ರಾಮದ ಐದನೇ ಒಂದು ಭಾಗ (1/5) ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆಧಾರದ ಮೇಲೆ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವುದು ವೈಜ್ಞಾನಿಕ ಕ್ರಮವಲ್ಲ ಹೀಗಾಗಿ ಇದಕ್ಕೆ ನಮ್ಮ ವಿರೋಧವಿದೆ.
* ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ಈ ಮುಂದಿನ ನಿರ್ಣಯಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ESA ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು.
* ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದ ಬಗರ್ ಹುಕುಂ, ಅರಣ್ಯ ಹಕ್ಕು ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣ ಪರಿಗಣಿಸಬೇಕು. ತಜ್ಞ ಸಮಿತಿಯಿಂದ ಭೌತಿಕವಾಗಿ ಅರಣ್ಯ ಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್ ವಾರುಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು.
* ಸೂಕ್ಷ್ಮ ಪ್ರದೇಶವಾಗಿ ಮಾಡಿದರೆ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಬೇಕು. ತಜ್ಞರು, ಪರಿಣಿತರ ಸಮಿತಿ ರಚಿಸಿ ವರದಿ ಮಾರ್ಪಾಡಿಗೆ ಕ್ರಮ ವಹಿಸಬೇಕು.
* ಭೌತಿಕವಾಗಿ ಸರ್ವೆ ನಂಬರ್ ವಾರು ಅಳತೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಕೇಂದ್ರವು ಒಂದು ವರ್ಷದ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆ ಅಂತಿಮಗೊಳಿಸದಂತೆ ಕೇಂದ್ರಕ್ಕೆ ಮನವಿ ಮಾಡಲು ನೀರ್ಣಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


Click it and Unblock the Notifications
