ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ; ಶೀಘ್ರವೇ ಮಾಡಲು ಸಿದ್ಧರಾಗಿ
ಬೆಂಗಳೂರು, ಅಕ್ಟೋಬರ್ 21; ಕರ್ನಾಟಕದ ಮುಜರಾಯಿ ಇಲಾಖೆ ವತಿಯಿಂದ ' ಕರ್ನಾಟಕ - ಭಾರತ್ ಗೌರವ್ ಕಾಶಿ ದರ್ಶನ' ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಇದಕ್ಕಾಗಿಯೇ ವಿಶೇಷ ರೈಲು ಸಿದ್ಧವಾಗಲಿದ್ದು, ಬುಕ್ಕಿಂಗ್ ಸಹ ಆರಂಭವಾಗಲಿದೆ.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯೋಜನೆಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ರೈಲ್ವೆ ಇಲಾಖೆಯ ಅಧಿಕಾರಿಗಳಾದ ಅನೂಪ್ ದಯಾನಂದ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ಸಚಿವರು ಐ. ಆರ್. ಸಿ. ಟಿ. ಸಿ, ಕೆ. ಎಸ್. ಟಿ. ಡಿ. ಸಿ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಸಚಿವರು ಕಾಶಿಯಾತ್ರೆಯ ವಿಶೇಷ ರೈಲನ್ನು ಅಕ್ಟೋಬರ್ 30ರೊಳಗೆ ಅಂತಿಮಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಮುಂದಿನ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್‌ನಲ್ಲಿ ಕಾಶಿಯ ಭವ್ಯತೆಯನ್ನು ಹೆಚ್ಚಿನ ಜನರು ನೋಡಲು ಅನುಕೂಲವಾಗುವಂತೆ ಕಾಶಿಗೆ ರಿಯಾಯಿತಿ ದರದ ಪ್ಯಾಕೇಜ್ ಘೋಷಣೆ ಮಾಡಿದ್ದರು. 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಎಂಬ ಯೋಜನೆಯನ್ನು ಮುಜರಾಯಿ ಇಲಾಖೆಯ ಮೂಲಕ ಜಾರಿಗೊಳಿಸಲಾಗುತ್ತಿದೆ.

ನವೆಂಬರ್ ಮೊದಲ ವಾರದಲ್ಲಿ ರೈಲು ಸಂಚಾರ
ವಾರಣಾಸಿ ಸಂಸದರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾಶಿಯನ್ನು ಅಭಿವೃದ್ಧಿಗೊಳಿಸಿದ್ದಾರೆ. ನರೇಂದ್ರ ಮೋದಿ ಕನಸಿನ 'ಭವ್ಯ ಕಾಶಿ-ದಿವ್ಯ ಕಾಶಿ' ಭವ್ಯತೆಯನ್ನು ಕರ್ನಾಟಕ ರಾಜ್ಯದ ಜನರು ನೋಡಿ ಆನಂದಿಸಬೇಕು ಎನ್ನುವ ಉದ್ದೇಶದಿಂದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಬಜೆಟ್‌ನಲ್ಲಿ ರಿಯಾಯಿತಿ ದರದ ಪ್ರವಾಸವನ್ನು ಘೋಷಣೆ ಮಾಡಿದ್ದರು.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಎಂದು ಹೆಸರು ಇಡಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಈ ಯೋಜನೆಯ ಮೊದಲ ರೈಲು ಉದ್ಘಾಟನೆಯಾಗಲಿದೆ.

ವಿಶೇಷ ರೈಲಿನ ವಿನ್ಯಾಸ
'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಎಂಬ ಯೋಜನೆಗಾಗಿಯೇ ವಿಶೇಷ ರೈಲನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಯೋಜನೆ ಜಾರಿಗೊಳಿಸಲು ಇದ್ದ ತಾಂತ್ರಿಕ ಅಡೆತಡೆಗಳನ್ನು ಬಗೆಹರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಈಗ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿವೆ. ಅಕ್ಟೋಬರ್ 30ರೊಳಗೆ ರೈಲು ಬೋಗಿ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ. ಬೋಗಿ ನಿರ್ಮಾಣ ಕಾರ್ಯದ ಪ್ರಗತಿ ಬಗ್ಗೆ ಪ್ರತಿದಿನದ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶೀಘ್ರದಲ್ಲೇ ಬುಕ್ಕಿಂಗ್ ವ್ಯವಸ್ಥೆ
'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯಾತ್ರೆಗೆ ಶೀಘ್ರದಲ್ಲೇ ಬುಕ್ಕಿಂಗ್ ಆರಂಭವಾಗಲಿದೆ. ಸಚಿವೆ ಶಶಿಕಲಾ ಜೊಲ್ಲೆ ಯಾತ್ರೆಯ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಶೀಘ್ರವೇ ವೆಬ್‌ಸೈಟ್ ಮತ್ತು ಇತರ ವಿಚಾರಗಳನ್ನು ಪ್ರಕಟಿಸುವಂತೆ ಸೂಚನೆ ನೀಡಿದರು. ಐ. ಆರ್. ಸಿ. ಟಿ. ಸಿ, ಕೆ. ಎಸ್. ಟಿ. ಡಿ. ಸಿ ಇಲಾಖೆಗಳು ವೆಬ್‌ಸೈಟ್ ಬಿಡುಗಡೆ ಮಾಡಲಿವೆ. ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಈ ಯೋಜನೆಗಾಗಿಯೇ ವಿಶೇಷ ರೈಲು ಬೋಗಿ ತಯಾರು ಮಾಡಲಾಗುತ್ತಿದೆ.
ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗ್‌ರಾಜ್-ಬೆಂಗಳೂರು ಮಾರ್ಗದಲ್ಲಿ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ರೈಲು 7 ದಿನದಲ್ಲಿ 4,161 ಕಿ. ಮೀ. ಸಂಚಾರ ನಡೆಸಲಿದೆ. 14 ಬೋಗಿಗಳ ಈ ರೈಲಿನಲ್ಲಿ 11 ಬೋಗಿಗಳು ಪ್ರಯಾಣಿಕರಿಗೆ ಮೀಸಲಾಗಿವೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತನೆ ಮಾಡಿ, ಭಜನೆಗೂ ಅವಕಾಶ ನೀಡಲಾಗಿದೆ.

15 ಸಾವಿರ ವೆಚ್ಚದ ನಿರೀಕ್ಷೆ
'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಪ್ಯಾಕೇಜ್ ಟೂರ್‌ಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಸಹಾಯಧನ ನೀಡಲಿದೆ. 7 ದಿನಗಳ ಪ್ರವಾಸ ಪ್ಯಾಕೇಜ್‌ನಲ್ಲಿ ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಸೇರಿದಂತೆ ಸುಮಾರು 15 ಸಾವಿರ ವೆಚ್ಚವಾಗುವ ನಿರೀಕ್ಷೆ ಇದೆ.
ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎಂಬುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂಬುದು ಮುಜರಾಯಿ ಇಲಾಖೆ ಆಶಯವಾಗಿತ್ತು. ಅದಕ್ಕೆ ತಕ್ಕಂತೆ ಈ ಯೋಜನೆ ಜಾರಿಗೆ ಬರಲಿದೆ.












Click it and Unblock the Notifications