KAS: ಕೆಎಎಸ್ ಮರು ಪರೀಕ್ಷೆಗೆ ಎಷ್ಟು ಕೋಟಿ ಖರ್ಚಾಗಿತ್ತು, ಮತ್ತೊಮ್ಮೆ ಪರೀಕ್ಷೆ ನಡೆಯಲಿದೆಯೇ ?
2ನೇ ಬಾರಿಯೂ ಕೆಎಎಸ್ ಮರು ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದಲ್ಲಿ ತಪ್ಪುಗಳಾಗಿವೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲ ಬಾರಿ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯಲ್ಲಿ ಹಲವು ತಪ್ಪುಗಳು ಆಗಿದ್ದವು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಎರಡನೇ ಬಾರಿಯೂ ಸಾಕಷ್ಟು ತಪ್ಪುಗಳಾಗಿದ್ದು, ಚರ್ಚೆಗೆ ಕಾರಣವಾಗಿದೆ. ಒಂದು ಬಾರಿ ಪರೀಕ್ಷೆ ನಡೆಸುವುದಕ್ಕೆ ಬರೋಬ್ಬರಿ 15 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಿದೆ.
ಈ ರೀತಿ ಇರುವಾಗಲೇ ಮರುಪರೀಕ್ಷೆಯನ್ನು ನಡೆಸಲಾಗಿತ್ತು. ಮರು ಪರೀಕ್ಷೆಯಲ್ಲಾದರೂ ಕನ್ನಡ ಪತ್ರಿಕೆಯಲ್ಲಿ ಯಾವುದೇ ತಪ್ಪುಗಳು ಇಲ್ಲದಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ನಿರೀಕ್ಷೆಗಳು ಸಹ ತಲೆಕೆಳಗಾಗಿವೆ. ಈ ಬಾರಿಯ ಪತ್ರಿಕೆಯೂ ತಪ್ಪಾಗಿರುವುದು ಮತ್ತೊಮ್ಮೆ ನಡೆಸಿದರೆ ಮತ್ತೆ ಕೋಟ್ಯಾಂತರ ರೂಪಾಯಿ ವ್ಯರ್ಥ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ಆಗಲಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಕನ್ನಡ ಹಾಗೂ ಕನ್ನಡದ ಅಭ್ಯರ್ಥಿಗಳ ಬಗ್ಗೆ ತೋರಿಸುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಕನ್ನಡ ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಆಡಳಿತಕ್ಕೆ ಬಂದ ಮೇಲೆ ಕನ್ನಡ ಹಾಗೂ ಕನ್ನಡಪರ ವಿಷಯಗಳಲ್ಲಿ ಜಾಣ ಮೌನ ಮೆರೆದಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಹೌದು ಇದಕ್ಕೆ ಮುಖ್ಯ ಕಾರಣ ಹಾಗೂ ಸಾಕ್ಷಿ ಕೆಎಎಸ್ ಪರೀಕ್ಷೆಯೇ ಆಗಿದೆ. ಮೊದಲ ಬಾರಿ ಪರೀಕ್ಷೆ ನಡೆದಾಗಲೂ ಸರ್ಕಾರ ಈ ವಿಷಯದ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿತ್ತು. ಇದೀಗ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎರಡನೇ ಬಾರಿ ಪರೀಕ್ಷೆ ನಡೆಸಲಾಗಿದೆ. ಈ ಬಾರಿಯೂ ಅದೇ ರೀತಿಯ ಆರೋಪಗಳು ಕೇಳಿಬರುತ್ತಿವೆ.
ಈ ಸಂಬಂಧ ಜೆಡಿಎಸ್ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕನ್ನಡ ಪ್ರಶ್ನೆಗಳಲ್ಲಿ ಭಾಷಾಂತರದ ವೇಳೆ ಎಡವಟ್ಟು ಮಾಡಿರುವ ಬಗ್ಗೆ ತನ್ನ ಅಸಮಾಧಾನವನ್ನು ಹೊರ ಹಾಕಿದೆ. ರಾಜ್ಯ ಭಾಷೆ ಕನ್ನಡದ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ ಜರಿದಿದೆ. ರಾಜ್ಯದ ಆಡಳಿತ ಭಾಷೆ ಕನ್ನಡದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದನ್ನು ಕನ್ನಡಿಗರು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಮುಂದುವರಿದು 2ನೇ ಬಾರಿಯೂ ಕೆಎಎಸ್ ಮರು ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದಲ್ಲಿ ತಪ್ಪುಗಳಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಹೇಳಿದೆ.
ಲಕ್ಷಾಂತರ ಸಂಖ್ಯೆಯ ನುರಿತ ಉಪನ್ಯಾಸಕರು, ಪ್ರಾಧ್ಯಾಪಕರಿದ್ದರೂ ಇಂಗ್ಲಿಷಿನಿಂದ ಕನ್ನಡಕ್ಕೆ ಸರಿಯಾಗಿ ಅನುವಾದ ಮಾಡಿಸದಿರುವುದು ನಾಚಿಕೆಗೇಡು. ಕನ್ನಡ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಮತ್ತೆ ಅನ್ಯಾಯವಾಗಿದೆ. ಗೆಜೆಟೆಡ್ ಅಧಿಕಾರಿಗಳ ನೇಮಕದ ವೇಳೆ ಭ್ರಷ್ಟಾಚಾರ, ಇತ್ತೀಚಿಗೆ ಪ್ರಶ್ನೆಪತ್ರಿಕೆಗಳ ಸೋರಿಕೆ, ಭಾಷಾಂತರ ಲೋಪಗಳು, ಪರೀಕ್ಷೆಯಲ್ಲಿನ ಎಡವಟ್ಟುಗಳು ಕರ್ನಾಟಕ ಲೋಕಸೇವಾ ಆಯೋಗದ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಜೆಡಿಎಸ್ ಹೇಳಿದೆ. ಒಂದು ಪರೀಕ್ಷೆ ನಡೆಸಲು 15 ಕೋಟಿಗೂ ಹೆಚ್ಚು ಖರ್ಚಾಗಿದೆ. ಮರು ಪರೀಕ್ಷೆಗೂ ಅಷ್ಟೇ ಹಣ ಖರ್ಚಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಲಾಗಿದೆ.
ಇದೇ ಪ್ರಶ್ನೆಯನ್ನು ಕನ್ನಡಿಗರು ಸಹ ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಇನ್ನು ಮೊದಲ ಬಾರಿ ತಪ್ಪುಗಳು ನಡೆದಾಗ ಎರಡನೇ ಬಾರಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಎರಡನೇ ಬಾರಿಯೂ ತಪ್ಪುಗಳಾಗಿದ್ದು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ, ಮೂರನೇ ಬಾರಿ ಪರೀಕ್ಷೆ ನಡೆಯಲಿದೆಯೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.












Click it and Unblock the Notifications