ಕರ್ನಾಟಕದ ಪ್ರಗತಿಯಲ್ಲಿ ಕುಂಠಿತ: "ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎನ್ನುವುದು ಕಿವಿಗೆ ಹೂವು"
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿರುವ ಪಂಚಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಅಭಿವೃದ್ಧಿ ಆಗುತ್ತಿದೆ ಎಂದೇ ಕಾಂಗ್ರೆಸ್ ಹೇಳುತ್ತಿದೆ. ಆದರೆ, ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಗುತ್ತಿಲ್ಲ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ದೂರಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಅಲ್ಲದೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಜನರ ಬದುಕು ಸುಧಾರಿಸಿದೆ ಹಾಗೂ ಆರ್ಥಿಕವಾಗಿ ಜನ ಶಕ್ತರಾಗಿದ್ದಾರೆ ಎಂದೇ ಹೇಳುತ್ತಿದೆ. ಆದರೆ ಆ ರೀತಿ ಆಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿವೆ. ಅದೇನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದ ಮಾದರಿ ಹಾಗೂ ಗ್ಯಾರಂಟಿ ಯೋಜನೆ ದೇಶದಾದ್ಯಂತ ಸುದ್ದಿ ಮಾಡಿದ್ದವು. ಕರ್ನಾಟಕ ಸರ್ಕಾರವು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದಲ್ಲೇ ಮಾದರಿಯಾಗಿತ್ತು. ಅಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೊದಲ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಆರ್ಥಿಕ ಪ್ರಗತಿ ಆಗಿಲ್ಲ ಎಂದು ಬಿಜೆಪಿ ದೂರಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂದು ಕನ್ನಡಿಗರ ಕಿವಿಗೆ ಹೂವಿಟ್ಟು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರಗತಿಶೀಲ ರಾಜ್ಯವಾದ ಕರ್ನಾಟಕದ ಆರ್ಥಿಕ ಪ್ರಗತಿಯನ್ನು ಅಧೋಗತಿಗೆ ತಳ್ಳಿದೆ ಎಂದು ಅವರು ದೂರಿದ್ದಾರೆ. 2024-25ರ ಆರ್ಥಿಕ ವರ್ಷದ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನೂ ಕಳಪೆಯಾಗಿದ್ದು ಜನವರಿವರೆಗೂ ಕೇವಲ 62% ರಷ್ಟು ಮಾತ್ರ ಪ್ರಗತಿಯಾಗಿದೆ ಎಂದು ಹೇಳಿದ್ದಾರೆ.
ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿಯಲ್ಲಿ ಜನ ನಿಮ್ಮಿಂದ ಅಷ್ಟೇನೂ ನಿರೀಕ್ಷೆ ಇಟ್ಟುಕೊಂಡಿರಲ್ಲಿ. ಆದರೆ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಹಿಂದ ಸಮುದಾಯಗಳ ಮತಗಳ ಮೇಲೆ ಸವಾರಿ ಮಾಡಿ ರಾಜಕೀಯ ಬದುಕು ಕಟ್ಟಿಕೊಂಡು ಸತತವಾಗಿ ಅಧಿಕಾರ ಅನುಭವಿಸುತ್ತ ಬಂದಿರುವ ತಾವು ಕನಿಷ್ಠ ಪಕ್ಷ ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೀರಿ ಎನ್ನುವ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ.
ಮುಂದುವರಿದು ಆದರೆ ಈ ಆರ್ಥಿಕ ವರ್ಷದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೇವಲ 53% ಆರ್ಥಿಕ ಪ್ರಗತಿ ಆಗಿದ್ದರೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಕೇವಲ 39% ಪ್ರಗತಿ ಆಗಿದೆ. ಇದೇನಾ ನಿಮ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಇದೇನಾ ನಿಮ್ಮ ಸಮಾಜವಾದ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಸಚಿವ ಮಹದೇವಪ್ಪ ಅವರೇ ಇದೇನಾ ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ಆಶಯ ಈಡೇರಿಸುವ ಪರಿ ಎಂದು ಕೇಳಿದ್ದಾರೆ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಪಕ್ಷದ ಡೋಂಗಿ ಸಾಮಾಜಿಕ ನ್ಯಾಯಕ್ಕೆ. ಬಹುಶಃ ಬಾಬಾಸಾಹೇಬ್ ಅಂಬೇಡ್ಕರರು ಇವತ್ತು ಬದುಕಿದ್ದಿದ್ದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಛೀಮಾರಿ ಹಾಕುತ್ತಿದ್ದರು ಎಂದೂ ಅವರು ಹೇಳಿದ್ದಾರೆ.












Click it and Unblock the Notifications