ಮೇಕೆದಾಟು ಜಲವಿದ್ಯುತ್ ಯೋಜನೆ ಕೈಬಿಟ್ಟ ಕರ್ನಾಟಕ

Posted By:
Subscribe to Oneindia Kannada
Cauvery
ಬೆಂಗಳೂರು, ಏ. 21 : ತಮಿಳುನಾಡು ಸರ್ಕಾರದ ಕೆಂಗೆಣ್ಣಿಗೆ ಗುರಿಯಾಗಿದ್ದ ಮೇಕೆದಾಟು ಜಲವಿದ್ಯುತ್ ಯೋಜನೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಯೋಜನೆಯ ಕುರಿತು ಕಾನೂನು ಸಮರವನ್ನು ತಪ್ಪಿಸಲು ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಕೃಷ್ಣಗಿರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎ. ಚೆಲ್ಲಕುಮಾರ್‌ ಪರ ಪ್ರಚಾರ ನಡೆಸಿದ ನಂತರ ಮಾತನಾಡಿದ ಇಂಧನ ಸಚಿವ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರ ಮೇಕೇದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿದರು. ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಆದ್ದರಿಂದ ತಮಿಳುನಾಡು ಸರ್ಕಾರದ ಜೊತೆ ಕಾನೂನು ಹೋರಾಟ ತಪ್ಪಿಸಲು ಯೋಜನೆ ಹಿಂಪಡೆಯಲಾಗಿದೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಕಳೆದ ವರ್ಷ ಕರ್ನಾಟಕ ಮೇಕೇದಾಟು ಜಲವಿದ್ಯುತ್ ಯೋಜನೆ ಆರಂಭಿಸುವುದಾಗಿ ಹೇಳಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಮೇಕೆದಾಟು ಯೋಜನೆ ಆರಂಭಿಸಿದರೆ, ತಮಿಳುನಾಡಿಗೆ ಹರಿದು ಬರುವ ಕಾವೇರಿ ನೀರಿನ ಪ್ರಮಾಣ ಕಡಿಮೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. [ಮೇಕೇದಾಟು ಯೋಜನೆಗೆ ಜಯಲಲಿತಾ ವಿರೋಧ]

ಕಾವೇರಿ ಕೊಳ್ಳದಲ್ಲಿ ಜಲವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳುವುದು ಕಾವೇರಿ ಐತೀರ್ಪಿನ ಉಲ್ಲಂಘನೆ ಯಾಗಿದೆ. ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದು ಜಯಲಲಿತಾ ಪ್ರಧಾನಿಗೆ ಪತ್ರ ಬರೆದಿದ್ದರು. ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. [ಮೇಕೇದಾಟು ಯೋಜನೆ ಸಮರ್ಥಿಸಿಕೊಂಡ ಸಚಿವರು]

ಸದ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಸರ್ಕಾರ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಈ ಯೋಜನೆ ಕಾರ್ಯಗತವಾಗಿದ್ದರೆ ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ತಮಿಳುನಾಡು ಕಾನೂನು ಹೋರಾಟ ಆರಂಭಿಸಿದೆ. ಆದ್ದರಿಂದ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

ಏನಿದು ಮೇಕೆದಾಟು ಯೋಜನೆ : ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು, ಮೇಕೆದಾಟು ಬಳಿ 500 ರಿಂದ 600 ಕೋಟಿ ರೂ. ವೆಚ್ಚದಲ್ಲಿ ಜಲವಿದ್ಯುತ್ ಯೋಜನೆ ಪ್ರಾರಂಭಿಸಿ, ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿಕೆ ನೀಡಿದ್ದರು, ಯೋಜನೆಗಾಗಿ ಸ್ಥಳ ಪರಿಶೀಲನೆಯನ್ನು ನಡೆಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Government will withdrawal its proposal to build a reservoir at Mekedatu said, Energy minister D.K. Shivakumar. Tamil Nadu Chief Minister J Jayalalithaa opposed the Mekedatu electric project, in the Cauvery basin without Tamil Nadu state consent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ