Karnataka Rains: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಮಳೆ ಮುನ್ಸೂಚನೆ
Karnataka Rains: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆಯೂ ಇದೀಗ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತದ ಪರಿಚಲನೆ ಉಂಟಾಗಿದೆ. ಪರಿಣಾಮ ರಾಜ್ಯದ ಹಲವೆಡೆ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 12) ಬೆಳಗ್ಗೆಯಿಂದಲೂ ಭೀಕರ ಚಳಿ, ಮಂಜು ಮುಸುಕಿದ್ದು ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದೇ ರೀತಿಯ ವಾತಾವರಣ ಹಲವು ಜಿಲ್ಲೆಗಳಲ್ಲಿ ಮುಂದುವರೆದಿದ್ದು, ಇನ್ನೂ ಮೂರು ದಿನಗಳಲ್ಲಿ ಯಾವಾಗ ಬೇಕಾದರೂ ಮಳೆಯಾಗಬಹದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೂ ಸಂಜೆಯಾದರೂ ಸೂರ್ಯನ ದರ್ಶನ ಆಗದೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಹವಾಮಾನ ಇಲಾಖೆ, ಆಗ್ನೇಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್‌ವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ. ಇನ್ನೇ ಸಂಕ್ರಾಂತಿ ಹಬ್ಬಕ್ಕೆ ಕ್ಷಣಗಣನೆ ಬಾಕಿಯಿದ್ದು, ಈ ವೇಳೆ ಬಂಗಾಳ ಕೊಲ್ಲಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುವ ಮುನ್ಸೂಚನೆ ಇದೆ.
ಜನವರಿ 13 ಮತ್ತು 14ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಜನವರಿ 13ರಂದು ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಇದೇ ವೇಳೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆಯಿದೆ. ವಿಜಯಪುರ, ಬೀದರ್, ಕಲಬುರ್ಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಅಲ್ಲಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮಂಜು ಕವಿದ ವಾತಾವರಣ ಮುಂದುವರೆಯಲಿದೆ ಎಂದು ಎಂದು ತಿಳಿಸಿದೆ.
ಜನವರಿ 14ರಂದು ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಇದೇ ವೇಳೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣಹಲವೆ ಮುಂದುವರೆಯುವ ಸಾಧ್ಯತೆಯಿದೆ. ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮಂಜು ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಜನವರಿ 15ರಿಂದ ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರಲಿದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ತಾಪಾಮಾನ ಪ್ರಮಾಣ ಕಡಿಮೆಯಾಗಲಿದ್ದು, ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.












Click it and Unblock the Notifications