28 ಕ್ಷೇತ್ರಗಳ ಹಣೆಬರಹ ನೀವೇ ನಿರ್ಧರಿಸಿ

Posted By:
Subscribe to Oneindia Kannada

ಬೆಂಗಳೂರು, ಏ. 16 : ಗುರುವಾರ ಲೋಕಸಭೆಯ 5ನೇ ಹಂತದ ಚುನಾವಣೆ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ 121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಚುನಾವಣಾಧಿಕಾರಿಗಳು ಮತಯಂತ್ರದ ಜೊತೆ ಮತದಾನ ಕೇಂದ್ರಕ್ಕೆ ತೆರಳಿದ್ದಾರೆ.

ಏ.17ರ ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಚುನಾವಣಾ ಆಯೋಗ ನೋಟಾ ಮತದಾನದ ವ್ಯವಸ್ಥೆಯನ್ನು ನೀಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾರಿಗೆ ಮತ ನೀಡಿದ್ದೇವೆ ಎಂಬುದನ್ನು ಖಾತ್ರಿ ಪಡಿಸುವ ವಿವಿಪ್ಯಾಟ್ ಯಂತ್ರಗಳನ್ನು ಪರಿಚಯಿಸಿದೆ.

vote

ನೀವು ವೋಟ್ ಮಾಡಿ : ಹದಿನಾರನೇ ಲೋಕಸಭೆಗೆ ಸಂಸದರನ್ನು ಚುನಾಯಿಸುವ ಹೊಣೆ ನಿಮ್ಮ ಮೇಲಿದೆ. ಗುರುವಾರ ನಿಮ್ಮ ಕೈಯಲ್ಲಿದೆ. ದೇಶದ ಅಭಿವೃದ್ಧಿಗಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ, ತಪ್ಪದೇ ಮತದಾನ ಮಾಡಿ. ಅಂದಹಾಗೆ ಒನ್ ಇಂಡಿಯಾ ಕನ್ನಡ ಮತದಾನದ ಕ್ಷಣ-ಕ್ಷಣದ ಮಾಹಿತಿಯನ್ನು ಬೆಳಗ್ಗೆ 7 ಗಂಟೆಯಿಂದ ಓದುಗರಿಗಾಗಿ ನೀಡುತ್ತದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 6 ಕೋಟಿ 42 ಕೋಟಿ ಮತದಾರರು ಮತದಾನ ಮಾಡುವ ಅವಕಾಶ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 54,264 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ 11,424 ಅತಿ ಸೂಕ್ಷ್ಮ ಮತಗಟ್ಟೆಗಳು ಹಾಗೂ 14,968 ಸೂಕ್ಷ್ಮ ಮತಗಟ್ಟೆಗಳಾಗಿವೆ. [ಮತದಾನಕ್ಕೆ ಆಯೋಗ ರೆಡಿ, ಬನ್ನಿ ಮತದಾನ ಮಾಡಿ]

ಚುನಾವಣಾ ಆಯೋಗ 2,95,000 ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿದೆ. ಇದೇ ಮೊದಲ ಬಾರಿಗೆ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಚ್ಚಲಾಗುತ್ತದೆ. ಮತದಾನಕ್ಕೆ ಅನುಕೂಲವಾಗುವಂತೆ ಖಾಸಗಿ ಸಂಸ್ಥೆಗಳು ಕೂಡ ವೇತನ ಸಹಿತ ರಜೆ ನೀಡಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ.

ಮತಗಟ್ಟೆಗಳಿಗೆ ಮತದಾರರು ಮೊಬೈಲ್ ಗಳನ್ನು ತರಬಾರದು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಮತಗಟ್ಟೆಯಲ್ಲಿ ಮತ ಹಾಕುವ ಚಿತ್ರವನ್ನು ತೆಗೆದರೆ ನೇರ ಜೈಲು ಪಾಲಾಗುವ ಭೀತಿ ಎದುರಿಸಬೇಕಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ. ಈ ನಿಯಮ ಚುನಾವಣಾ ಸಿಬ್ಬಂದಿಗೂ ಅನ್ವಯವಾಗಲಿದೆ. [ಮತಗಟ್ಟೆಗೆ ಮೊಬೈಲ್ ತರಬೇಡಿ]

ಮತದಾರರಿಗೆ ಮತಗಟ್ಟೆ ಕುರಿತು ಆಗುವ ಗೊಂದಲಗಳನ್ನು ತಪ್ಪಿಸಲು ಆಯೋಗ ಎಸ್ಎಂಎಸ್ ಸೇವೆ ಆರಂಭಿಸಿದೆ. ನಿಮ್ಮ ಮೊಬೈಲ್ ನಿಂದ KAEPIC ಎಂದು ಟೈಪ್ ಮಾಡಿ ನಂತರ ಸ್ಪೇಸ್ ಬಿಟ್ಟು ನಿಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು 9243355223 ನಂಬರ್ ಗೆ ಎಸ್ಎಸ್ಎಂ ಮಾಡಿದರೆ, ಮತಗಟ್ಟೆ ಮಾಹಿತಿ ದೊರೆಯುತ್ತದೆ. [ಮತಗಟ್ಟೆ ಹುಡುಕಲು ಎಸ್ಎಂಎಸ್ ಮಾಡಿ]

ಮತದಾರರ ಗುರುತಿನ ಪತ್ರ ವಿಲ್ಲದವರು ಆಯೋಗ ಸೂಚಿಸಿರುವ ಇತರ ದಾಖಲೆಗಳನ್ನು ಸಲ್ಲಿಸಿ ಮತದಾನ ಮಾಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಗುರುತು ದೃಢೀಕರಿಸಲು ಆಯೋಗ ಸೂಚಿಸಿರುವ ಪರ್ಯಾಯ ದಾಖಲೆಗಳನ್ನು ನೀಡಬಹುದಾಗಿದೆ. [ಗುರುತಿನ ಪತ್ರಗಳು]

ಈ ಚುನಾವಣೆಯ ಕೆಲವು ವಿಶೇಷತೆಗಳು:
* ಲೋಕಸಭಾ ಚುನಾವಣೆಗಿಂತಲೂ ವಿಧಾನಸಭಾ ಚುನಾವಣೆಯಲ್ಲಿನ ಮತದಾನದ ಪ್ರಮಾಣ ಹೆಚ್ಚಾಗಿರುತ್ತದೆ.
* 2014ರ ಲೋಕಸಭಾ ಚುನಾವಣೆ ಮೇಲೆ 25 ಲಕ್ಷ ಹೊಸ ಮತದಾರರು ರಾಜ್ಯದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
* ಮಹಿಳಾ ಮತ್ತು ಪುರುಷ ಮತದಾರರ ಅನುಪಾತ ಸಾವಿರಕ್ಕೆ 958 ರಿಂದ 960 ಕ್ಕೆ ಏರಿದೆ.
* ಮತಯಂತ್ರಗಳನ್ನು ಸಂರಕ್ಷಿಸುವ ಸ್ಟ್ರಾಂಗ್ ರೂಂಗಳಿಗೆ ಅರೆಸೇನಾಪಡೆ ಭದ್ರತೆ ಒದಗಿಸಲಾಗಿದೆ.
* ಬಿಬಿಎಂಪಿ ವ್ಯಾಪ್ತಿಯಲ್ಲಿ ನೂರು ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಮೊದಲ ಬಾರಿಗೆ ನೋಟಾ "ಈ ಮೇಲಿನ ಯಾರೂ ಅಲ್ಲ" ಎಂಬ ಆಯ್ಕೆಯನ್ನು ಮತಯಂತ್ರಗಳಲ್ಲಿ ಒದಗಿಸಲಾಗಿದೆ.
* ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ 1925 ಮತಗಟ್ಟೆಗಳಲ್ಲಿ ಪ್ರಾಯೋಗಿಕವಾಗಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2014 : Election Commission and officials were well prepared to hold elections on Thursday, April 17. Come and vote.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ