ಸರ್ಕಾರ ಸಾರಿಗೆ ಇಲಾಖೆಗೆ ನೀಡಬೇಕಿದ್ದ 414 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ನಿಜವೇ?
ಬೆಂಗಳೂರು, ಡಿಸೆಂಬರ್ 25: ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಯಿಂದ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಶಕ್ತಿ ಯೋಜನೆ ಅಂದರೆ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದ ಸಾರಿಗೆ ನಿಗಮಕ್ಕೆ ನಷ್ಟವಾಗಿದೆ. ಅಲ್ಲದೇ ಸಾರಿಗೆ ಇಲಾಖೆಗೆ ನೀಡಬೇಕಿದ್ದ 414 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎನ್ನುವ ಆರೋಪಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆಯಾಗಿದೆ. ತಮ್ಮ ಪ್ರತಿಯೊಂದು ಸುಳ್ಳಿನ ಸರಮಾಲೆಯ ಟ್ಟೀಟ್‌ಗೂ ನಾವು ಏಕೆ ಉತ್ತರಿಸುತ್ತೇವೆ ಎಂಬುದು ಗೊತ್ತಿದೆಯೇ? ನಮಗೆ ನಮ್ಮ ಅಭಿವೃದ್ದಿ ಕಾರ್ಯಗಳ ಅಂಕಿ ಅಂಶಗಳೇ ನಮ್ಮ ಸಾಧನೆಯ ಮಾನದಂಡ ಎಂಬ ಅಚಲವಾದ ನಂಬಿಕೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್ಆರ್ಟಿಸಿಗೆ - ರೂ.2481 ಕೋಟಿ , ಬಿಎಂಟಿಸಿಗೆ - ರೂ. 1126 ಕೋಟಿ, ವಾಯುವ್ಯ ಸಾರಿಗೆಗೆ - ರೂ 1613 ಕೋಟಿ . ಕಲ್ಯಾಣ ಕರ್ನಾಟಕ ಸಾರಿಗೆಗೆ- ರೂ 1321 ಕೋಟಿ ರೂ. ಅನುದಾನ, ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ರೂ 6,543 ಕೋಟಿ ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ.
ಈವರೆಗೆ ಇಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿರುವ ನಮಗೆ 414 ಕೋಟಿ ರೂಪಾಯಿ ಬಿಡುಗಡೆ ಮಾಡುವುದು ಕಷ್ಟವೇ? ತಮ್ಮ ಬಿ.ಜೆ.ಪಿ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ.
2023 ಮಾರ್ಚ್‌ನಲ್ಲಿ , 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡದೇ, ಅದಕ್ಕೆ ಬೇಕಾದ ಅನುದಾನವನ್ನು ನೀಡದೆ, ನಿವೃತ್ತಿ ಹೊಂದಿದ 11,694 ಸಿಬ್ಬಂದಿಗಳಿಗೆ ತಮ್ಮ ಕಾಲದ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣ ರೂ. 224.05 ಕೋಟಿ ನಾವು ಪಾವತಿಸಿದ್ದೇವೆ. ತಮ್ಮ ದುರಾಡಳಿತಕ್ಕೆ ಇದಕ್ಕಿಂತ ಬೇರೆ ಕೈಗನ್ನಡಿಯ ಅವಶ್ಯಕತೆ ಇದೆಯೇ? ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಶೂನ್ಯ ಅಭಿವೃದ್ಧಿ ಕಾರ್ಯ, ಶೂನ್ಯ ಸಾಧನೆಗೆ ಹಾಗೂ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದ ತಮ್ಮ ಸರ್ಕಾರಕ್ಕೆ ನಮ್ಮ ಧಿಕ್ಕಾರವಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಆರೋಪವೇನು?
ಕರ್ನಾಟಕದ ಸಾರಿಗೆ ಇಲಾಖೆಯನ್ನು ಶಕ್ತಿ ಹೆಸರಿನಲ್ಲಿ ನಿಶ್ಯಕ್ತ ಗೊಳಿಸುತ್ತಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ. ಸಾರಿಗೆ ಇಲಾಖೆಗೆ ಇದುವರೆಗೂ 414 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು, ಸಾರಿಗೆ ಇಲಾಖೆಯನ್ನು ದಿವಾಳಿ ಮಾಡ ಹೊರಟಿದೆ. ಮಹಾನ್ ಸುಳ್ಳುಗಾರ ರಾಮಲಿಂಗಾ ರೆಡ್ಡಿ ಅವರೇ ಸರ್ಕಾರ ₹414 ಕೋಟಿ ಬಾಕಿ ಉಳಿಸಿಕೊಂಡ ನಂತರವೂ, ಸಾರಿಗೆ ಸಂಸ್ಥೆ ಹೇಗೆ ಹಿಂದೆಂದೂ ಕಂಡು ಕೇಳರಿಯದಂತಹ ಲಾಭದಲ್ಲಿದೆ ಎಂಬುದನ್ನು ತಿಳಿಸುವಿರಾ ಎಂದು ಬಿಜೆಪಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಿದೆ.












Click it and Unblock the Notifications