ಕರ್ನಾಟಕದಲ್ಲಿದ್ದ ಪಾಕ್ ಪ್ರಜೆಗಳಿಗೆ ಗೇಟ್‌ಪಾಸ್, ಎಷ್ಟು ಮಂದಿಗೆ?
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿರುವ ಭಾರತವು ಎಲ್ಲ ರಾಜ್ಯಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಗಂಟುಮೂಟೆ ಕಟ್ಟಿಸಿ ಎಂದು ಖಡಕ್ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಕರ್ನಾಟಕದಲ್ಲೂ ಇದ್ದ ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಲು ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಈಗಾಗಲೇ ಕೆಲವರನ್ನು ಕರ್ನಾಟಕದಿಂದ ಗಡಿಪಾರು ಮಾಡಲಾಗಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಪಾಕ್ ಪ್ರಜೆಗಳಿದ್ದು ಅವರಿಗೂ ಗೇಟ್‌ಪಾಸ್ ಕೊಡಲಾಗುತ್ತಿದೆ. ಸದ್ಯ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ಕು ಮಂದಿ ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೀರ್ಘಾವಧಿ ವೀಸಾ ಹೊಂದಿರುವವರ ಗಡಿಪಾರು ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿಲ್ಲ. ಹಾಗಾಗಿ ದೀರ್ಘಾವಧಿ ವೀಸಾ ಹೊಂದಿರುವ 90ಕ್ಕೂ ಹೆಚ್ಚು ಮಂದಿ ಪಾಕ್ ಪ್ರಜೆಗಳು ಸದ್ಯ ರಾಜ್ಯದಲ್ಲೇ ಇದ್ದಾರೆ ಎನ್ನಲಾಗಿದೆ. ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ವೇಳೆ ವಿವಿಧ ಜಿಲ್ಲೆಗಳಲ್ಲಿ 90ಕ್ಕೂ ಹೆಚ್ಚು ಮಂದಿ ಪಾಕ್ ಪ್ರಜೆಗಳು ವಾಸವಿರುವುದು ಗೊತ್ತಾಗಿದೆ. ಕೆಲ ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ಕರ್ನಾಟಕದಲ್ಲಿದ್ದು, ಇವರಿಗೆ ಏಪ್ರಿಲ್ 29ರವರೆಗೆ ಮಾತ್ರ ಭಾರತದಲ್ಲಿರಲು ವಿನಾಯಿತಿ ನೀಡಲಾಗಿದೆ. ಬಳಿಕ ಅವರನ್ನು ವಾಪಸ್ ಕಳಿಸಲು ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಟ್ಕಳ, ಕಾರವಾರದಲ್ಲಿ ಹೆಚ್ಚಿನ ಜನ ಕಂಡುಬಂದಿದ್ದಾರೆ. ಇನ್ನು ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು ಭಾಗಗಳಲ್ಲೂ ಪಾಕ್ ಪ್ರಜೆಗಳು ನೆಲೆಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ವಿವಿಧ ನಗರಗಳಲ್ಲಿರುವ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.
ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ, ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧವಾಗಿರುತ್ತದೆ. ಅನಿವಾರ್ಯತೆಯಾದಾಗ ಮಾತ್ರ ಯುದ್ಧಕ್ಕೆ ಹೆಜ್ಜೆ ಇಟ್ಟು ನಮ್ಮ ಸಾರ್ವಭೌಮತೆ ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. ಇದನ್ನು ಭಾರತ ಪ್ರತಿ ಸಂದರ್ಭದಲ್ಲೂ ಸಾಬೀತುಪಡಿಸಿದೆ. ಇತಿಹಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಿ, ಪ್ರತಿಯೊಬ್ಬ ಭಾರತೀಯರಿಗೆ ಸೂಕ್ತ ರಕ್ಷಣೆ ಕೊಡುವುದು ನಮ್ಮ ಆದ್ಯತೆಯಾಗಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು ಎಂದಿದ್ದಾರೆ.
ಉಗ್ರರ ದಾಳಿ ಸಂಬಂಧ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇನ್ನೂ ಸೃಷ್ಟಿಯಾಗಿಲ್ಲ. ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರವಾಗಿಲ್ಲ, ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಲಿ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಬ್ಯಾನ್!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ಘಟನೆಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಲೇ ಇದೆ. ಭಾರತ, ಸೇನೆ ಹಾಗೂ ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಭಾರತ ಸರ್ಕಾರವು ಡಾನ್ ನ್ಯೂಸ್, ಸಮಾ ಟಿವಿ, ಆರಿ ನ್ಯೂಸ್, ಜಿಯೋ ನ್ಯೂಸ್ ಸೇರಿದಂತೆ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಿದೆ.












Click it and Unblock the Notifications