SSLC ಪರೀಕ್ಷೆಯಲ್ಲಿ ಕನ್ನಡದಲ್ಲೇ ಹೆಚ್ಚು ವಿದ್ಯಾರ್ಥಿಗಳು ಫೇಲ್: ಪ್ರಥಮ ಭಾಷೆ ಅಂಕ 125ರಿಂದ 100ಕ್ಕೆ ಇಳಿಸಲು ಒತ್ತಡ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಥಮ ಭಾಷೆ (ಕನ್ನಡ) ವಿಷಯದ ಗರಿಷ್ಠ ಅಂಕಗಳನ್ನು 125ರಿಂದ 100ಕ್ಕೆ ಇಳಿಸಬೇಕು ಎಂಬ ಒತ್ತಡ ಮತ್ತೆ ತೀವ್ರಗೊಂಡಿದೆ. ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದೇ ಈ ಎಸ್‌ಎಸ್‌ಎಲ್‌ಸಿ ಕನ್ನಡ ಅಂಕ ಕಡಿತ ವಿವಾದ ಮರುಕಳಿಸಲು ಪ್ರಮುಖ ಕಾರಣವಾಗಿದೆ.

ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಣ ಇಲಾಖೆಯು ಪ್ರಥಮ ಭಾಷೆಯ ಅಂಕಗಳನ್ನು ಇತರ ವಿಷಯಗಳಂತೆ 100ಕ್ಕೆ ಸೀಮಿತಗೊಳಿಸುವ ಚಿಂತನೆ ನಡೆಸಿತ್ತು. ಆದರೆ, ಸಾಹಿತ್ಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಆ ಬಳಿಕ ಶಿಕ್ಷಣ ಸಚಿವರು ಈ ಕುರಿತು ವರದಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕನ್ನಡವೇ ಮಾತೃಭಾಷೆಯಾಗಿರುವ ಹಲವು ವಿದ್ಯಾರ್ಥಿಗಳಿಗೆ ಹಳಗನ್ನಡ ಮತ್ತು ವ್ಯಾಕರಣ ಕಷ್ಟವಾಗುತ್ತಿದ್ದು, ಇದರಿಂದ ಕನ್ನಡದಲ್ಲೇ ಹೆಚ್ಚು ಫೇಲ್ ಆಗುತ್ತಿದ್ದಾರೆ. ಹೀಗಾಗಿ ಗರಿಷ್ಠ ಅಂಕವನ್ನು 100ಕ್ಕೆ ಇಳಿಸುವಂತೆ ಆಗ್ರಹಗಳು ಕೇಳಿಬಂದಿವೆ.

SSLC

ಆತಂಕ ಮೂಡಿಸುತ್ತಿರುವ ಅಂಕಿ-ಅಂಶಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ ಅನುತ್ತೀರ್ಣರಾಗುವವರ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. 2023ರಲ್ಲಿ ಶೇ. 7.29, 2024ರಲ್ಲಿ ಶೇ. 12.75 ಹಾಗೂ 2025ರಲ್ಲಿ ಶೇ. 12.97ರಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದರು. 2026ರಲ್ಲಿ ಬರೋಬ್ಬರಿ 19,000 ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿ. ಇತರ ವಿಷಯಗಳಿಗೆ ಹೋಲಿಸಿದರೆ ಕನ್ನಡದಲ್ಲೇ ಹೆಚ್ಚು ಮಂದಿ ಫೇಲ್ ಆಗುತ್ತಿದ್ದಾರೆ. ಇದರ ಜೊತೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವವರ ಸಂಖ್ಯೆ ಕೂಡ 2016ರಲ್ಲಿ ಶೇ. 83.13ರಷ್ಟಿದ್ದರೆ, 2025ರ ವೇಳೆಗೆ ಶೇ. 81.03ಕ್ಕೆ ಕುಸಿದಿದೆ.

100 ಅಂಕಕ್ಕೆ ಸೀಮಿತಗೊಳಿಸಲು ಒತ್ತಾಯ

"ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಪ್ರಥಮ ಭಾಷೆಗೆ 125 ಅಂಕ ನಿಗದಿ ಮಾಡುವ ಮೂಲಕ ಮಕ್ಕಳ ಮೇಲೆ ವಿಪರೀತ ಒತ್ತಡ ನಿರ್ಮಿಸಲಾಗಿದೆ. ಕನ್ನಡವನ್ನು ಕಲಿಯಲು ಮಕ್ಕಳಿಗೆ ಕಷ್ಟವಾಗುತ್ತಿದೆ ಎಂದಾಗ, ಕಲಿಸುವ ವ್ಯವಸ್ಥೆಯಲ್ಲಿನ ದೋಷವನ್ನು ಸರಿಪಡಿಸುವ ಬದಲು, ಆ ದೋಷವನ್ನು ಮಕ್ಕಳ ಮೇಲೆ ಹೊರಿಸುವುದು ಸರಿಯಲ್ಲ. ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಇತರ ವಿಷಯಗಳಂತೆ ಪ್ರಥಮ ಭಾಷೆಯನ್ನೂ 100 ಅಂಕಕ್ಕೆ ಸೀಮಿತಗೊಳಿಸಬೇಕು" ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ.

ಸಾಹಿತಿಗಳು ಮತ್ತು ಹೋರಾಟಗಾರರ ತೀವ್ರ ವಿರೋಧ

ಅಂಕ ಕಡಿತದ ಪ್ರಸ್ತಾವನೆಗೆ ಸಾಹಿತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಕನ್ನಡಕ್ಕೆ 125 ಅಂಕ ನಿಗದಿ ಮಾಡಿರುವುದು ಗೋಕಾಕ್ ಚಳವಳಿಯ ಫಲ ಎಂಬ ಐತಿಹಾಸಿಕ ಸತ್ಯವನ್ನು ಯಾರೂ ಮರೆಯಬಾರದು. ಗೋಕಾಕ್ ವರದಿಯಲ್ಲಿ ಕನ್ನಡಕ್ಕೆ 150 ಅಂಕ ನಿಗದಿ ಮಾಡಲಾಗಿತ್ತು, ತದನಂತರ ಅದನ್ನು 125ಕ್ಕೆ ಇಳಿಸಲಾಯಿತು. ಇದೀಗ ಅದನ್ನು 100 ಅಂಕಕ್ಕೆ ಇಳಿಸುವ ನಿರ್ಧಾರವು ಪ್ರಾದೇಶಿಕ ಭಾಷೆಯ ಮಹತ್ವವನ್ನು ಕುಗ್ಗಿಸುವ ನೀತಿಯಾಗಿದೆ" ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪ್ರತಿಕ್ರಿಯಿಸಿ, "ಪ್ರಥಮ ಭಾಷೆಯ ಗರಿಷ್ಠ ಅಂಕ ಕಡಿತದ ಬಗ್ಗೆ ಶಿಕ್ಷಣ ಇಲಾಖೆ ಏಕಾಏಕಿ ತೀರ್ಮಾನ ಕೈಗೊಳ್ಳುವಂತಿಲ್ಲ. ಇದು ಗೋಕಾಕ್ ಚಳವಳಿಯಂತಹ ದೊಡ್ಡ ಹೋರಾಟದ ಹಿನ್ನೆಲೆಯನ್ನು ಹೊಂದಿದೆ. ಕನ್ನಡ ಶಿಕ್ಷಕರು, ಸಾಹಿತಿಗಳು, ಮತ್ತು ಹೋರಾಟಗಾರರನ್ನು ಕರೆಸಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ. ಶಿಕ್ಷಣ ತಜ್ಞ ಗಣೇಶ ಭಟ್ಟ ಅವರು ಕೂಡ ಉನ್ನತ ಮಟ್ಟದ ಸಮಿತಿ ರಚಿಸಿ ಪರಾಮರ್ಶೆ ನಡೆಸಲು ಸಲಹೆ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+