School Students: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: "ಕರ್ನಾಟಕದ ವಿದ್ಯಾರ್ಥಿಗಳು & ಶಿಕ್ಷಕರಿಗೆ ಸಂಕಷ್ಟ"
School Students: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾದಾಗಿನಿಂದಲೂ ಹಲವು ಕಾರಣಗಳಿಗೆ ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಇದರಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಸಂಸದರು ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಸಂಸದ ಯದುವೀರ್ ಒಡೆಯರ್ ಅವರು, 2 ಕೋಟಿ ಮನೆಗಳಲ್ಲಿ ವಾಸಿಸುವ 7 ಕೋಟಿ ಜನರನ್ನು ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬುದು ಸಮೀಕ್ಷೆ ಪ್ರಾರಂಭವಾಗುವ ಮೊದಲೇ ಸ್ಪಷ್ಟವಾಗಿತ್ತು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈಗ ದಸರಾ ರಜೆಗಳನ್ನು ವಿಸ್ತರಿಸಿದೆ. ಸರ್ಕಾರಿ ಶಾಲೆಗಳು ದೀಪಾವಳಿಯ ನಂತರವೇ ಮತ್ತೆ ತೆರೆಯುತ್ತವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳ ಕಾಲ ಶಾಲೆಗಳಿಂದ ದೂರವಿರುತ್ತಾರೆ, ಆದರೆ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ - ಇದು ಲಕ್ಷಾಂತರ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಈ ಸಮೀಕ್ಷೆಯು ನಿಜವಾಗಿಯೂ ಸಾಮಾಜಿಕ ಕಲ್ಯಾಣದ ಬಗ್ಗೆ ಆಗಿದ್ದರೆ, ಬೇಸಿಗೆ ರಜೆಯ ಸಮಯದಲ್ಲಿ ಶಿಕ್ಷಣವನ್ನು ಅಡ್ಡಿಪಡಿಸದೆ ವ್ಯವಸ್ಥಿತವಾಗಿ ನಡೆಸಬಹುದಿತ್ತು. ಆದರೆ ಸರಿಯಾಗಿ ಯೋಜಿಸದ ಈ ಸಮೀಕ್ಷೆಯು ಸಂಕುಚಿತ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಶಿಕ್ಷಣವನ್ನು ಅಡ್ಡಿಪಡಿಸುತ್ತಿದೆ ಎಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ರಿಯಾಕ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಜಾತಿಗಣತಿ ನಡೆಸಲು ಎಷ್ಟು ಸಮಯ ಬೇಕು ಎನ್ನುವ ಬಗ್ಗೆ ಪೂರ್ವಯೋಜನೆ ಇಲ್ಲ. ಜಾತಿಗಣತಿಯಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ ಹಾಗೂ ಜಾತಿಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಯಾರು ಪಾಠ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.
ಯಾವುದೇ ಪೂರ್ವಸಿದ್ಧತೆ, ರೂಪುರೇಷೆ, ಗೊತ್ತು ಗುರಿ ಇಲ್ಲದೆ ಕೇವಲ ರಾಜಕೀಯ ತೆವಲಿಗೆ ಮಾಡುತ್ತಿರುವ ಈ ಈ ಜಾತಿಗಣತಿಯಿಂದ ಕನ್ನಡಿಗರಿಗೆ ನಯಾ ಪೈಸೆ ಉಪಯೋಗವಿಲ್ಲ. ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷಗಳ ಹಿಂದೆಯೇ ₹150 ಕೋಟಿ ರೂಪಾಯಿ ಹಣವನ್ನ ಪೋಲು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, ಈಗ ಮತ್ತೊಮ್ಮೆ ₹650 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣವನ್ನ ಬೇಕಾಬಿಟ್ಟಿ ಪೋಲು ಮಾಡುತ್ತಿದೆ ಎಂದು ದೂರಿದ್ದಾರೆ.












Click it and Unblock the Notifications