Rain Alert: ವಿವಿಧ ಜಿಲ್ಲೆಗಳಲ್ಲಿ ಇಂದು ವರುಣಾರ್ಭಟ, ಹಾವೇರಿ ರೈತರ ಮೊಗದಲ್ಲಿ ಮಂದಹಾಸ
Rain Alert Today: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಅಂತ್ಯದ ಹೊತ್ತಿಗೆ ಧಾರಾಕಾರ ಮಳೆ ಎಚ್ಚರಿಕೆ ನೀಡಲಾಗಿದೆ. ಇಂದು ಮಧ್ಯ ಕರ್ನಾಟಕದ ಜಿಲ್ಲೆಯಾದ ಹಾವೇರಿಯಲ್ಲಿ ಮಧ್ಯಾಹ್ನದಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಜಿಲ್ಲೆ ವ್ಯಾಪ್ತಿಯ ಅನೇಕ ತಾಲೂಕುಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಬಿರು ಬಿಸಿಲಿಗೆ ತತ್ತರಿಸಿದ್ದ ಜನರಿಗೆ, ರೈತಾಪಿ ಮಂದಿಗೆ ಈ ಮಳೆ ಹರ್ಷ ತಂದಿದೆ. ಸಂಜೆವರೆಗೂ ಮಳೆ ಮುಂದುವರಿದಿದೆ.
ಜೋಳ, ಕಡಲೆ, ಮೆಕ್ಕೆ ಜೋಳ ಸೇರಿದಂತೆ ಇತರ ಬೀಜ ಬಿತ್ತನೆಗಾಗಿ ಹೊಲ ಹದ ಮಾಡಿಕೊಂಡು ಕಾಯುತ್ತಿದ್ದ ರೈತರಿಗೆ ಈ ಮಳೆ ವರದಾನವಾಗಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದು ಹಾವೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಹಾವೇರಿ ಜಿಲ್ಲೆಗೆ ಅಕ್ಟೊಬರ್ 24ರಂದು ಸಹ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಂದು ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ತಜ್ಞರು ಭಾನುವಾರದ ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ, ಬಹುತೇಕ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ವಾತಾವರಣ ಇತ್ತು. ಮಳೆ ಮರೆಯಾಗಿತ್ತು. ಹಿಂಗಾರು ಮಳೆ ಅವಧಿಯಲ್ಲಿ ಬೇಸಿಗೆ ವಾತಾವರಣ ಉಂಟಾಗಿತ್ತು. ಮುಂಗಾರು ಹಂಗಾಮಿನ ಬಿತ್ತಿನ ಫಸಲು ಪಡೆದ ರೈತರು, ಹಿಂಗಾರು ಹಂಗಾಮಿನ ಬಿತ್ತನೆಗೆ ಜಮೀನು ಸಜ್ಜುಗೊಳಿಸಿದ್ದರು. ಆದರೆ ಮಳೆ ರಾಯ ಕೈ ಕೊಟ್ಟಿದ್ದರಿಂದ ಎಲ್ಲವು ಅತಂತ್ರವಾಗಿತ್ತು.
ರಾಬಿ ಬೆಳೆಗಳ ಬಿತ್ತನೆ ಶುರು: ರೈತರಲ್ಲಿ ಹರ್ಷ
ಸದ್ಯ ಮಳೆ ಮತ್ತೆ ಆರ್ಭಟ ಶುರುವಿಟ್ಟುಕೊಂಡಿದೆ. ಇಂದು ಒಂದು ಗಂಟೆಗೂ ಹೆಚ್ಚು ಕಾಲ ಹಾವೇರಿಯಲ್ಲಿ ಸುರಿದ ಮಳೆಯಿಂಗಾಗಿ ಒಣಗಿದ್ದ ಭೂಮಿ ತಂಪಾಗಿದೆ. ಜೋಳ, ಕಡಲೆ ಇತರ ರಾಬಿ ಬೆಳೆಗಳ ಬಿತ್ತನೆ ಆರಂಭವಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ದಿನ ಹಾವೇರಿಯಲ್ಲಿ ಮಳೆ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಇದೆ.
ಮುಂದಿನ 3 ಗಂಟೆಯಲ್ಲಿ ಭಾರೀ ಮಳೆ: ಐಎಂಡಿ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ವಿಜಯನಗರ, ದಾವಣಗೆರೆ, ರಾಮನಗರ, ಚಾಮರಾಜ, ಚಾಮರಾಜ, ದಕ್ಷಿಣ ಕನ್ನಡ, ಚಾಮರಾಜನಗರ, ಹಾವೇರಿ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಭಾನುವಾರ ಮಧ್ಯಾಹ್ನದ ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications