ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೂ ಅಧಿಕ ಮಳೆ ಸೂಚನೆ
ಬೆಂಗಳೂರು, ಅಕ್ಟೋಬರ್ 04: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಆರಂಭವಾಗಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆ ನಗರವನ್ನು ಅಸ್ತವ್ಯಸ್ತಗೊಳಿಸಿದೆ.
ಇದರೊಂದಿಗೆ, ಅಕ್ಟೋಬರ್ 6ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತ್ಯವಾಗಿದೆ. ಆದರೆ ಚಂಡಮಾರುತದ ಪ್ರಭಾವದಿಂದ ಇನ್ನೂ ಎರಡು ದಿನಗಳ ಅವಧಿ ಮಳೆಯಾಗಲಿದೆ. ಅಕ್ಟೋಬರ್ 5 ಮತ್ತು 6ರಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಈ ಎರಡು ದಿನಗಳ ಅವಧಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಮುಂದೆ ಓದಿ...

ಅಕ್ಟೋಬರ್ 6ರವರೆಗೂ ರಾಜ್ಯದಲ್ಲಿ ಅಧಿಕ ಮಳೆ ಸೂಚನೆ
ಅಕ್ಟೋಬರ್ 6ರ ನಂತರ ಮುಂಗಾರು ಅಂತ್ಯವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್ 30ಕ್ಕೆ ಅಧೀಕೃತವಾಗಿ ಮುಂಗಾರು ಅಂತ್ಯವಾಗಿದ್ದರೂ ಅಕ್ಟೋಬರ್ 6ರ ವೇಳೆಗೆ ಮುಂಗಾರು ಅಂತ್ಯವಾಗಲು ಹವಾಮಾನ ಪರಿಸ್ಥಿತಿ ಸೂಕ್ತವಾಗಿದೆ ಎಂದು ಇಲಾಖೆ ತಿಳಿಸಿದೆ. ಇದರೊಂದಿಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಲ್ಲಿ ಅಕ್ಟೋಬರ್ 4ರಿಂದ ಆರಂಭಗೊಂಡು ಅಕ್ಟೋಬರ್ 5, 6ರಂದು ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ನೀಡಿದೆ.

ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೊಡಗಿನಲ್ಲಿ ಮಂಗಳವಾರ ಹಾಗೂ ಬುಧವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗುವುದಾಗಿ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ನಗರವನ್ನು ಅಸ್ತವ್ಯಸ್ತಗೊಳಿಸಿದ ಮಳೆ
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ನಾಗರಭಾವಿ, ರಾಜಾಜಿನಗರ, ನಂದಿನಿ ಲೇಔಟ್, ಲಕ್ಕಸಂದ್ರ, ಮಾರತ್‌ಹಳ್ಳಿ, ಕೋರಮಂಗಲದಲ್ಲಿ ಅಧಿಕ ಮಳೆ ದಾಖಲಾಗಿದೆ. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಮತ್ತೆ ಮಳೆಯಾಗುವ ಸೂಚನೆ ನೀಡಲಾಗಿದೆ.
ಜೆ.ಸಿ. ನಗರ, ಸಂಪಂಗಿ ರಾಮನಗರ, ಆರ್. ಆರ್. ನಗರ, ಕುರುಬರಹಳ್ಳಿ, ಮಲ್ಲತ್ತಹಳ್ಳಿ, ರಾಮಮೂರ್ತಿ ನಗರ, ಎಚ್‌ಎಎಲ್ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ವರದಿಯಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಮಳೆ ಸೂಚನೆ
ಎರಡು ದಿನಗಳ ಹಿಂದೆ ದೇಶದಲ್ಲಿ ಶಾಹೀನ್ ಚಂಡಮಾರುತ ಅಬ್ಬರ ಕ್ಷೀಣಿಸಿದೆ. ಮುಂಗಾರು ಕೂಡ ಅಂತ್ಯವಾಗುತ್ತಿದೆ. ಇದಾಗ್ಯೂ ಈಶಾನ್ಯ ರಾಜ್ಯಗಳಲ್ಲಿ, ಅಂದರೆ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್‌ನಲ್ಲಿ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ.
ದಕ್ಷಿಣದ ಕೇರಳ, ತಮಿಳುನಾಡು, ಗೋವಾ, ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ಕೂಡ ಅಕ್ಟೋಬರ್ 6ರವರೆಗೂ ಅಧಿಕ ಮಳೆ ಸೂಚನೆ ನೀಡಲಾಗಿದೆ.
ಈ ಬಾರಿ ಮುಂಗಾರು ಅವಧಿಯಲ್ಲಿ, ಅಂದರೆ ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಟ್ಟದ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೇಶದ ದಕ್ಷಿಣ ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಕೂಡ ಸಾಮಾನ್ಯ ಮಳೆ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications