Karnataka Rain: ಇಂದು ರಾಜ್ಯದ ಹಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಬೀಳುವ ಮುನ್ಸೂಚನೆ
ಕರ್ನಾಟಕ, ಜೂನ್, 13: ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದೆ. ಆದರೆ ಕಲೆವೆಡೆ ಮಾತ್ರ ಅಬ್ಬರದ ಮಳೆಯಾಗಿದ್ದು, ಇನ್ನು ಹಲವೆಡೆ ಮಳೆಯೇ ಇಲ್ಲದೆ ರೈತರು ಬೇಸಿಗೆ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಾಗೆಯೇ ಮತ್ತೊಂದೆಡೆ ಇಂದು ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನಗರದ ಹಲವೆಡೆ ಮಳೆರಾಯ ಅಬ್ಬರಿಸಿದ ಬೊಬ್ಬೆರೆದಿದ್ದಾನೆ. ಪರಿಣಾಮ ಕೆಲವೆಡೆ ರಸ್ತೆಗಳು ಕೆರೆಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾದ ಘಟನೆಯೂ ನಡೆಯಿತು.

ಮತ್ತೊಂದೆಡೆ ಅಂಡರ್ ಪಾಸ್‌ಗಳಲ್ಲಿ ತೆರಳದಂತೆ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ ಘಟನೆಗಳು ಕೂಡ ಜರುಗಿದವು. ಇನ್ನು ಇಂದು (ಜೂನ್ 13) ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ವೇಳೆಗೆ ನಗರದ ಹಲವೆಡೆ ಮಳೆರಾಯ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದ್ದು, ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಇನ್ನು ಮುಂದಿನ ಎರಡ್ಮೂರು ದಿನಗಳ ಕಾಲ ಬಿರುಗಾಳಿ, ಗುಡುಗು ಸಮೇತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ನಿನ್ನೆ (ಸೋಮವಾರ) ಬೆಂಗಳೂರು ನಗರದ ಆರ್‌ಟಿ ನಗರ, ಶಿವಾಜಿನಗರ, ಹೆಬ್ಬಾಳ, ಎಂ.ಜಿ.ರಸ್ತೆ, ಸದಾಶಿವನಗರ, ಮಲ್ಲೇಶ್ವಂ, ಯಶವಂತಪುರ, ಮಡಿವಾಳ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಶಾಂತಿನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಕೋರಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ನಗರದಲ್ಲಿ ಇಂದು (ಮಂಗಳವಾರ) ಕೂಡ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದೆ.
ಬರೀ ಬೆಂಗಳೂರು ಅಷ್ಟೇ ಅಲ್ಲದೆ ಕರಾವಳಿಯ ಹಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆರಾಯ ಅರ್ಭಟಿಸಿದ್ದಾನೆ. ಇನ್ನು ಮಂಗಳೂರಿನಲ್ಲಿ ನಿನ್ನೆ 5 ಸೆಂ.ಮೀ. ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ, ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 4, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಾಲಿ, ಜನ್ಮನೆ, ಉಡುಪಿಯ ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ರಾಯಚೂರು ಜಿಲ್ಲೆಯ ಕುರ್ಡಿ, ಮಾನನ್ವಿ, ಚಿಕ್ಕಮಗಳೂರು ಜಿಲ್ಲೆಯ ಯುಗಟಿ, ಕೊಟ್ಟಿಗೆಹಾರ, ವಿಜಯನಗರದ ಕೂಡ್ಲಿಗಿ, ಕೊಟ್ಟೂರಿನಲ್ಲಿ ತಲಾ 3 ಸೆಂ.ಮೀ. ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.
3 ದಿನಗಳ ಕಾಲ ಮಳೆ ಆರ್ಭಟ ಮುಂದುವರಿಕೆ
ಜೂನ್ 13 ಮತ್ತು ಜೂನ್ 14ರಂದು ರಾಜ್ಯದ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವೆಡೆ ಮಳೆ ಬೀಳುವ ಮುನ್ಸೂಚನೆಯನ್ನ ನೀಡಿದೆ.
ಇನ್ನು ಕರಾವಳಿ ಭಾಗದಲ್ಲಿ ಇಂದು ಬಿರುಗಾಳಿ ಗಂಟೆಗೆ 40ರಿಂದ 45 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದ್ದು, ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಸವನ್ನು ಕೂಡ ರವಾನಿಸಲಾಗಿದೆ.
ಅದರಲ್ಲೂ ಮಂಗಳೂರಿನಲ್ಲಿ ಇಷ್ಟು ದಿನ ಬಿಸಿಲಿನ ವಾತಾರಣ ಮುಂದುವರೆದಿದ್ದು, ಇದರ ಪರಿಣಾಮ ನಗರದ ಹಲವೆಡೆ ನೀರಿನ ಹಾಹಾಕಾರವೂ ಕೂಡ ಉಂಟಾಗಿತ್ತು. ಆದ್ದರಿಂದ ಜಿಲ್ಲೆಯ ಹಲವು ಶಾಲಾ, ಕಾಲೇಜುಗಳಿಗೆ ರಜೆಯನ್ನು ಸಹ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಮಳೆರಾಯ ಕರಾವಳಿ ಭಾಗಗದಲ್ಲಿ ಆರ್ಭಟ ಶುರು ಮಾಡಿದ ಹಿನ್ನೆಲೆ ನೀರಿನ ಭರ ನೀಗಿದಂತಾಗಿದೆ. ಮತ್ತೊಂದೆಡೆ ಕಡಲ ತೀರದ ನಿವಾಸಿಗಳಿಗೆ ಇದೀಗ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳಲ್ಲಿ ಈಗಾಗಲೇ ಎನ್‌ಡಿಆರ್‌ಎಫ್ ತಂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications