Karnataka rain: ಬಿಸಿಲ ಬೇಗೆಗೆ ಬೆಂದಿರುವ ಜಿಲ್ಲೆಗಳಿಗೆ ಸೆಪ್ಟೆಂಬರ್ ಆರಂಭದಲ್ಲೇ ತಂಪೆರೆಯಲಿದ್ದಾನೆ ವರುಣ
ಕರ್ನಾಟಕ, ಆಗಸ್ಟ್, 25: ರಾಜ್ಯಕ್ಕೆ ಈ ಬಾರಿ ಮುಂಗಾರು ಎಂಟ್ರಿ ಕೊಟ್ಟಿದ್ದೇ ತಡವಾಗಿ. ಜುಲೈ ತಿಂಗಳ ಮಧ್ಯದಲ್ಲಿ ಅಬ್ಬರದ ಮಳೆಯಾದ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಕೆರೆ, ಹಳ್ಳ, ಕೋಡಿಗಳು ತುಂಬಿ ಹರಿದಿದ್ದವು. ಅಲ್ಲದೆ ಜಲಾಶಯಗಳ ನೀರಿನ ಮಟ್ಟದಲ್ಲೂ ಸುಧಾರಿಸಿತ್ತು. ಆದರೆ ಆಗಸ್ಟ್ ಆರಂಭದಿಂದಲೂ ಇಲ್ಲಿವರೆಗೂ ಮಳೆರಾಯ ತನ್ನ ಆರ್ಭಟವನ್ನು ನಿಲ್ಲಿಸಿದ್ದು, ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಮತ್ತೆ ಆರ್ಭಟಿಸಲಿದ್ದಾನೆ ಎನ್ನುವ ಮುನ್ಸೂಚನೆ ಇದೆ.
ಇದೀಗ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದೆ. ಇನ್ನು ಇಂದು ಕೂಡ ಈ ಭಾಗದಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾಗೆಯೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೇಂಬರ್ ತಿಂಗಳ ಆರಂಭದಿಂದ ಮಳೆರಾಯ ಆರ್ಭಟಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಒಂದು ವೇಳೆ ಇದರಂತೆಯೇ ಮಳೆರಾಯ ಕರುಣೆ ತೋರಿದರೆ ಬತ್ತಿಹೋಗುತ್ತಿರುವ ಕೆರೆ, ಹಳ್ಳಗಳಿಗೆ ಜೀವಕಳೆ ಬಂದಂತಾಗುತ್ತದೆ. ಮತ್ತೊಂದೆಡೆ ಜಲಾಶಗಳಲ್ಲಿ ನೀರಿನ ಮಟ್ಟವೂ ಕೂಡ ಏರಿಕೆಯಾಗುತ್ತದೆ.
ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇಂದು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಹಲವೆಡೆ ಮಳೆ ಸುರಿಯುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮೋಡಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಸಾಧಾರಣ ಮಳೆಯಾಗುವೆ ಸಾಧ್ಯತೆಯಿದೆ ಅಂತಲೂ ತಿಳಿಸಿದೆ.












Click it and Unblock the Notifications