Heavy Rain Alert: ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್', ಒಂದು ವಾರದ ಕರ್ನಾಟಕ ಹವಾಮಾನ ವರದಿ
ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಆಗಾಗ ಕೃಪೆ ತೋರುತ್ತಿರುವ ಮಳೆರಾಯ ತಂಪೆರೆಯುತ್ತಿದ್ದಾರೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ (7cm ಗೂ ಅಧಿಕ) ಬರುವ ಕಾರಣಕ್ಕೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮುಂದಿನ ಏಪ್ರಿಲ್ 24ರವರೆಗೆ ವ್ಯಾಪಕ ಮಳೆ ಬರುವ ಮುನ್ಸೂಚನೆ ಇದೆ. ಈ ಪೈಕಿ ದಕ್ಷಿಣ ಒಳನಾಡಿನ ಭಾಗದಲ್ಲಿ ತುಸು ಹೆಚ್ಚೆ ಚುರುಕಾಗಿರುವ ಪೂರ್ವ ಮುಂಗಾರು ಮಳೆಯು ಅಬ್ಬರಿಸಲಿದೆ.

ಏಪ್ರಿಲ್ 20ರಂದು ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಒಂದು ದಿನ ಭರ್ಜರಿ ಮಳೆ ಬರಲಿದೆ. ಪ್ರತಿ ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವರೆಗೆ ಜೋರು ಗಾಳಿ ಬೀಸಲಿದೆ. ಅಂದು ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ತಾಪಮಾನ ಇಳಿಕೆ ಆಗಲಿದೆ. ಮಬ್ಬು ವಾತಾವರಣ ಸೃಷ್ಟಿಯಾಗಲಿದೆ, ಇಡೀ ದಿನ ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅನೇಕ ಜಿಲ್ಲೆಗಳಿಗೆ ವ್ಯಾಪಕ ಮಳೆ ಸಾಧ್ಯತೆ
ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 24ರವರೆಗೆ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಇದರಲ್ಲಿ ಏಪ್ರಿಲ್ 20ರಂದು ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳನ್ನು ಬಿಟ್ಟು ಉಳಿದಂತೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಮಂಡ್ಯ, ಶಿವಮೊಗ್ಗ, ವಿಜಯನಗರ, ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಸಂಭವ ಇದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಕೊಪ್ಪಳ್ಳ, ಗದಗ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಅಲ್ಲಲ್ಲಿ ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಇನ್ನೂ ಕೆಲವೆಡೆ 40 ಡಿ.ಸೆ ತಾಪಮಾನ
ಮಳೆಯ ಆಗಮನ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ವಾತಾವರಣದಲ್ಲಿ ತಾಪಮಾನ, ಶಾಖದ ಅಲೆ ಪ್ರಯಾಣ ಕಡಿಮೆ ಯಾಗಿತ್ತು. ಇದೀಗ ಮತ್ತೆ ಏರಿಕೆಯ ಲಕ್ಷಣಗಳು ಕಾಣುತ್ತಿವೆ. ಸದ್ಯ ಚಿಕ್ಕನಹಳ್ಳಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ತಲಾ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆಗಾಲ ಬರುವವರಿಗೂ ಈ ಸೆಕೆಯ ವಾತಾವರಣವನ್ನು ಅನಿವಾರ್ಯವಾಗಿ ತಡೆದುಕೊಳ್ಳಬೇಕಿದೆ.
ಮುಂಗಾರು ಮಳೆ ಮೇಲೆ ಭಾರಿ ನಿರೀಕ್ಷೆ
ತಾಪಮಾನದಲ್ಲಿನ ಏರಿಳಿಕೆಗಳು ಮುಂದುವರಿದಿವೆ. ಉತ್ತಮ ಮುಂಗಾರು ಮಳೆ ಮುನ್ಸೂಚನೆ ನೀಡುವ ಮೂಲಕ ಹವಾಮಾನ ಇಲಾಖೆಯು ಈ ವರ್ಷ ಮುಂಗಾರು ಋತುವಿನ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಬರಗಾಲದಿಂದ ತತ್ತರಿಸಿರುವ ಜನರು, ರೈತರಿಗೆ ವಿಜ್ಞಾನಿಗಳ ಈ ಮುನ್ಸೂಚನೆಗಳು ಭರವಸೆ ಹುಟ್ಟಲು ಕಾರಣವಾಗಿದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲೂ ಸಹ ಏಪ್ರಿಲ್ 19 ಇಲ್ಲವೇ 20ರಿಂದ ಮಳೆ ಚುರುಕು ಪಡೆಯುವ ಸಾಧ್ಯತೆ ಇದೆ. ಈ ವರ್ಷ ಒಂದೇ ಒಂದು ಹನಿ ಮಳೆ ಸಹ ಆಗಿಲ್ಲ. ಬಿಸಿಲ ಝಳ ತಡೆಯಲಾಗದೇ ಜನರು ಆಕಾಶದತ್ತ ನೋಡುತ್ತಿದ್ದಾರೆ. ಬೆಂಗಳೂರಿಗರು ಮಳೆ ಕಾಯುತ್ತಿರುವ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಗಳೂರಿನ ಶಾಖದ ಪರಿಸ್ಥಿತಿಯನ್ನು ಮೀಮ್ಸ್‌ಗಳು ಸಾರಿ ಹೇಳುತ್ತಿವೆ.












Click it and Unblock the Notifications