Karnataka Rain: ಅಕ್ಟೋಬರ್ 10 ರಿಂದ ರಾಜ್ಯದಲ್ಲಿ ಮಳೆ ನಿರೀಕ್ಷೆ
ಅಕ್ಟೋಬರ್ 9ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಅಕ್ಟೋಬರ್ 10ರ ನಂತರ ಮಳೆ ಮತ್ತೆ ಚುರುಕಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.
ಈಗಾಗಲೇ ರಾಜ್ಯದಲ್ಲಿ ಮಳೆ ಕೊರತೆಯಿಂದ ಜನ ಕಂಗಾಲಾಗಿದ್ದು, ಅಕ್ಟೋಬರ್ ನಲ್ಲಿ ಮಳೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳ ಮೊದಲ ದಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ನೆಮ್ಮದಿ ತರಿಸಿತ್ತು, ಆದರೆ ಈಗ ಮತ್ತೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ಅಕ್ಟೋಬರ್ 9ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಈ ಅವಧಿಯಲ್ಲಿ ತಾಪಮಾನ ಕೂಡ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಅನಿಶ್ಚಿತ ಮಳೆಯಿಂದಾಗಿ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಕೆರೆ ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಭಾರಿ ಸಮಸ್ಯೆಯಾಗಲಿದೆ.
ಸೋಮವಾರದ ಮಳೆ ವಿವರ
ಮಂಗಳವಾರ (ಅ.3) ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾದ್ನಾದಲ್ಲಿ 26.5 ಮಿಮೀ ಮಳೆಯಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಉಳಿದಂತೆ ಕಲಬುರಗಿ ಜಿಲ್ಲೆಯ ಅಡ್ಕಿ, ಕುರ್ಗುಂಟ, ಮುಧೋಳ, ಜಾಕನಪಲ್ಲಿಯಲ್ಲಿ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೇಪು, ಉಜಿರೆ, ಅರಳ, ವಿಟ್ಲ, ನೆರಿಯಾ, ಉಡುಪಿ ಜಿಲ್ಲೆಯ ನಾಡ್ಪಲು, ಕಲ್ತೋಡು, ಕವಾರ್ಡಿ, ಹಳ್ಳಿಹೊಳೆ, ಯಾದಗಿರಿ ಜಿಲ್ಲೆಯ ಕಾಕಲ್ವಾರ್, ಮಿನಾಸಪುರ, ಚಂದ್ರಿಕಿ, ಬೀದರ್ ಜಿಲ್ಲೆಯ ಬೊಂತಿ, ಚಿಮ್ಮೆಗಾವ, ಮರಕುಂಡದಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಕ್ಟೋಬರ್ 10ರ ಬಳಿಕವೇ ಮಳೆ
ಅಕ್ಟೋಬರ್ 9ರವರೆಗೆ ರಾಜ್ಯದಲ್ಲಿ ಒಣಹವೆ ಇರಲಿದ್ದು, ಅಕ್ಟೋಬರ್ 10ರಿಂದ ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮುಖ್ಯವಾಗಿ ಬೆಂಗಳೂರು, ಮೈಸೂರು, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾದರೆ ರಾಜ್ಯದ ಜನ ಸ್ವಲ್ಪವಾದರು ಸುಧಾರಿಸಿಕೊಳ್ಳುತ್ತಾರೆ, ಈ ತಿಂಗಳಿನಲ್ಲಿ ಕೂಡ ಮಳೆ ಕೈಕೊಟ್ಟರೆ ಬೇಸಿಗೆ ಕಾಲ ಭೀಕರವಾಗಿರಲಿದೆ.












Click it and Unblock the Notifications