Karnataka rain: ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆಯ್ತು?-ಏನೆಲ್ಲಾ ಅನಾಹುತಗಳಾದ್ವು?-ಮಾಹಿತಿ, ವಿವರ
Karnataka rain: ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೆಂದಿದ್ದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಶುಕ್ರವಾರ (ಏಪ್ರಿಲ್ 12) ಮಳೆರಾಯ ತಂಪೆರೆದಿದ್ದು, ಇದರಿಂದ ಜನರು, ರೈತಾಪಿ ವರ್ಗದವರ ಮುಖದಲ್ಲಿ ಸಂತಸ ಮೂಡಿದೆ. ಮತ್ತೊಂದೆಡೆ ಭಾರೀ ಮಳೆ ಪರಿಣಾಮ ಹಲವು ಜಿಲ್ಲೆಗಳಲ್ಲಿ ಅನಾಹುತಗಳು ಕೂಡ ಸಂಭವಿಸಿವೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಿದೆ ಹಾಗೂ ಏನೆಲ್ಲ ಅನಾಹುತಗಳು ಸಂಭವಿಸಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಯುಗಾದಿ ನಂತರ ರಾಜ್ಯದ ಹಲವೆಡೆ ಮಳೆರಾಯ ಕರುಣೆ ತೋರಿದ್ದಾನೆ. ಹಾಗೆಯೇ ಇಂದು ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮನ್ಸೂಚನೆಯನ್ನು ನೀಡಿದೆ. ಇನ್ನು ನಿನ್ನೆ ಸುರಿದ ಮಳೆಯಿಂದಾಗಿ ಯಾವ ಕಡೆಯಲ್ಲ ಹಾನಿಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹಾಸನ, ಬಾಗಲಕೋಟೆ, ಕಲಬುರಗಿ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಗದಗ, ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಡಗು, ಶಿವಮೊಗ್ಗ, ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.
* ಕಾಫಿನಾಡು ಅಂತಲೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರಿನ ಹಲವೆಡೆ 40 ನಿಮಿಷಕ್ಕೂ ಹೆಚ್ಚು ಮಳೆ ಸುರಿದಿದ್ದು, ಕಾಫಿ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿದೆ. ಅಲ್ಲದೆ ಮಂಜಿನ ನಗರಿ ಅಂತಲೇ ಹಸರುವಾಸಿಯಾಗಿರುವ ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣ ಸೇರಿ ಹಲವೆಡೆ ಉತ್ತಮ ಮಳೆ ಸುರಿದಿದೆ ಎಂದು ತಿಳಿದುಬಂದಿದೆ. ಕೊಪ್ಪ ತಾಲೂಕಿನ ಜಯಪುರ, ಮೇಗುಂದ ಗ್ರಾಮ, ಚಿಕ್ಕಮಗಳೂರು ತಾಲೂಕಿನ, ಖಾಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಗ್ರಾಮ, ಶಂಕರ ಫಾಲ್ಸ್, ಅರೆನೂರು ಭಾಗದಲ್ಲಿ ಸುಮಾರು ಮಳೆರಾಯ ತಂಪೆರೆದಿದ್ದಾನೆ.
ಇನ್ನು ಬಿರುಗಾಳಿ ಮಳೆಗೆ ಶಿರಗೋಳ ಗ್ರಾಮದಲ್ಲಿ ರಸ್ತೆಗೆ ಬೃಹತ್ ಗಾತ್ರದ ಅರಳಿ ಮರವೊಂದು ಬಿದ್ದಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೊಂದೆಡೆ ಇದೇ ಊರಿನಲ್ಲಿ ಬಾಳೆ ಗಿಡಗಳು ಧರೆಗುರುಳಿವೆ. ಅಷ್ಟೇ ಅಲ್ಲದೇ ಸಂಗಮೇಶ್ವರ ಪೇಟೆಯ ಶಾಲೆಯ ಕಾಂಪೌಂಡ್ ಮೇಲೆ ಮರ ಬಿದ್ದ ಘಟನೆಯೂ ನಡೆದಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
* ವಿಜಯಪುರ ಸೇರಿದಂತೆ ಜಿಲ್ಲೆಯ ಹಲವಡೆ ಸಾಧಾರಣ ಮಳೆಯಾಗಿದೆ. ಬಿರುಗಾಳಿ ಮಳೆಯಿಂದ ಇಂಡಿ ತಾಲೂಕಿನಲ್ಲಿ ಅಲ್ಲಲ್ಲಿ ಮರಗಳು, ಬೆಳೆಗಳು ನೆಲಕ್ಕುರುಳಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಕೆಲವೆಡೆ ಮೇವು ಕೂಡ ಮಳೆಯಲ್ಲಿ ನೆಂದು ಹಾಳಾಗಿದೆ. ಚಡಚಣ ತಾಲೂಕಿನ ಶಿರಾಡೋಣ ಗ್ರಾಮದ ಮಹಾದೇವ ರಕಮಾಜಿ ಪಾಂಡ್ರೆ ಅವರ ಜಮೀನಿನಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ.
* ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಲವು ಗ್ರಾಮದಲ್ಲಿ 50 ನಿಮಿಷಕ್ಕೂ ಹೆಚ್ಚಿನ ಕಾಲ ಮಳೆ ಸುರಿದಿದ್ದು, ಬುಳ್ಳಾಪುರದಲ್ಲಿ ಬಿರುಗಾಳಿಗೆ ವೀರಭದ್ರಪ್ಪ ಸೊರಟೂರ ಎಂಬುವವರ ಮನೆ ಚಾವಣಿ ಹಾರಿ ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಕಿತ್ತೂರು, ಸವದತ್ತಿ, ಬೈಲ ಹೊಂಗಲ, ರಾಮದುರ್ಗ ತಾಲೂಕಿನ ಹಲವೆಡೆ ಮಳೆರಾಯ ತಂಪೆರೆದಿದ್ದಾನೆ.
* ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ತಾಲೂಕಿನ ಅಲ್ಲಲ್ಲಿ ಸಾದಾರಣ ಮಳೆ ಬಿದ್ದಿದೆ. ಆಯನೂರು ಸಮೀಪ ಬಿ.ಎಚ್.ರಸ್ತೆ ಮೇಲೆ ಬೃಹತ್ ಮರ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಆನಂದಪುರಂ ಹೋಬಳಿ ಯಡೇಹಳ್ಳಿ ರೈಲ್ವೆ ಲೆವೆಲ್ ಕ್ರಾಸ್ ಸಮೀಪದ ಯಾಸ್ಮಿನ್ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಜಖಂ ಗೊಂಡಿದೆ. ಖೈರಾ ಗ್ರಾಮದ ಹೇಮಾವತಿ ಎಂಬುವರ ಮನೆ ಮೇಲೆ ಮರದ ರೆಂಬೆ ಬಿದ್ದು ಹಾನಿಯಾಗಿದೆ ಎಂದು ತಿಳದುಬಂದಿದೆ.
ಇನ್ನು ಶಿವಮೊಗ್ಗ ತಾಲೂಕು ಆಯನೂರು ಕೋಟೆಯ ಜಾಕೀರ್ ಹುಸೇನ್ ಮತ್ತು ಅವರ ಇಬ್ಬರು ಮಕ್ಕಳು ಕುರಿಗಳನ್ನು ಮೇಯಿಸುವಾಗ ಜೋರು ಗಾಳಿಮಳೆ ಬಂದಿದ್ದರಿಂದ ಸಮೀಪದಲ್ಲಿದ್ದ ಶೆಡ್‌ಗೆ ಹೋಗಿದ್ದರು. ಕುರಿಗಳು ಅರಳಿಮರದ ಕೆಳಗೆ ನಿಂತಿದ್ದು, ಈ ಸಮಯದಲ್ಲಿ ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications