ತಿರುಪತಿ ಲಡ್ಡು ವಿವಾದ: ರಾಜ್ಯದ ಅರ್ಚಕರಿಂದ ಮಹತ್ವದ ನಿರ್ಧಾರ
ದೇಶದೆಲ್ಲೆಡೆ ಈಗ ತಿರುಪತಿ ಲಡ್ಡು ವಿವಾದದ ಚರ್ಚೆಗಳು ನಡೆಯುತ್ತಿವೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನೆಣ್ಣೆ ಸೇರಿದಂತೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಈ ಗೊಂದಲದ ಬೆನ್ನಲ್ಲೇ ರಾಜ್ಯದ ಅರ್ಚಕರೆಲ್ಲ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಇನ್ನು ಮುಂದೆ ತಿರುಪತಿ ಲಡ್ಡು ಪ್ರಸಾದವನ್ನು ಇಲ್ಲಿನ ದೇವಸ್ಥಾನಗಳಲ್ಲಿ ಬಳಸದಿರಲು ಅಖಿಲ ಕರ್ನಾಟಕ ಅರ್ಚಕರ ಸಂಘ ತೀರ್ಮಾನಿಸಿದೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ನಡೆದಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುವರೆಗೂ ಪ್ರಸಾದವನ್ನು ನಾವು ಯಾರೂ ಬಳಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದ ಮುಖ್ಯ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಕಲ್ಯಾಣೋತ್ಸವ, ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ತಿರುಪತಿಯ ಲಡ್ಡು ಪ್ರಸಾದವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವ ಆರೋಪ ಕೇಳಿ ಬಂದಿರುವ ಕಾರಣ ಲಡ್ಡು ಪ್ರಸಾದಕ್ಕೆ ಅರ್ಚಕರು ಬ್ರೇಕ್ ಹಾಕಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿತರಿಸುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ, ಮೀನಿನ ಎಣ್ಣೆ ಸೇರಿದಂತೆ ಇತರೆ ಕಲಬೆರಕೆ ಪದಾರ್ಥಗಳ ಬಳಕೆ ವಿವಾದವು ದೇಶದಾದ್ಯಂತ ಸಂಚಲನ ಮೂಡಿಸುತ್ತಿದೆ. ಇದರ ಬೆನಲ್ಲೇ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲ ದೇವಾಲಯಗಳಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿದೆ.

ಇನ್ನು ರಾಜ್ಯದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಸ್ಥಾನಗಳಲ್ಲಿ ಇನ್ನು ಮುಂದೆ ನಂದಿನಿ ತುಪ್ಪ ಮಾತ್ರವೇ ಬಳಸುವುದನ್ನು ಕಡ್ಡಾಯಗೊಳಿಸಿದೆ. ಕರ್ನಾಟಕ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಹೊಸ ಸುತ್ತೋಲೆ ಹೊರಡಿಸಿದ್ದು, ಎಲ್ಲ ಪ್ರಮುಖ ದೇವಾಲಯಗಳಲ್ಲಿ ಪ್ರಸಾದ ವಿತರಿಸಲು ರಾಜ್ಯದ್ದೇ ಬ್ರ್ಯಾಂಡ್ ಆಗಿರುವ ಕೆಎಂಎಫ್‌ನ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕೆಂದು ಸೂಚನೆ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಿತರಿಸಲಾಗುವ ಪ್ರಸಾದದ ಪರೀಕ್ಷೆಯನ್ನು ಮಾಡಲು ಸಹ ಸರ್ಕಾರ ಮುಂದಾಗಿದೆ.
ಏನಿದು ವಿವಾದ?: ತಿರುಮಲದಲ್ಲಿ ಪ್ರಸಾದವಾಗಿ ವಿತರಿಸುವ ಶ್ರೀವಾರಿ ಲಡ್ಡು ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದು, ಈ ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ಪ್ರಸಾದದ ತಯಾರಿಕೆಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ದೂರಿದ್ದರು. ಈ ಆರೋಪ ಸದ್ಯ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಜಗನ್ ಮೋಹನ್ ಅವರ ಅಧಿಕಾರದ ಅವಧಿಯಲ್ಲಿ ಭಕ್ತರಿಗೆ ಕಳಪೆ ಲಡ್ಡೂಗಳು ಮತ್ತು ಕಳಪೆ ಗುಣಮಟ್ಟದ ಅನ್ನ ಪ್ರಸಾದವನ್ನು ವಿತರಿಸಲಾಗಿದೆ. ತಜ್ಞರ ವರದಿಯಲ್ಲೂ ಇದು ದೃಢವಾಗಿದ್ದು, ಆಂಧ್ರಪ್ರದೇಶದಲ್ಲಿ ಟಿಡಿಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಮಲ ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪವನ್ನು ಬಳಸಲಾಗುತ್ತಿದೆ ಎಂದು ಚಂದ್ರಬಾಬು ಅವರು ಸಮರ್ಥಿಸಿಕೊಂಡಿದ್ದರು.












Click it and Unblock the Notifications