Karnataka Elections 2023: ಆಂಜನೇಯನನ್ನು ಕೆಣಕಿ ಕಾಂಗ್ರೆಸ್ ತಪ್ಪು ಮಾಡಿದೆ: ನಟಿ ಶೃತಿ ವಾಗ್ದಾಳಿ
ವಿಜಯಪುರ,ಮೇ6: ಆಂಜನೇಯನನ್ನು ಕೆಣಕಿ ಕಾಂಗ್ರೆಸ್ ತಪ್ಪು ಮಾಡಿದೆ. ರಾಮನ ಭಕ್ತ ಭಜರಂಗಬಲಿಯ ಆಶೀರ್ವಾದದಿಂದ ನರೇಂದ್ರ ಮೋದಿ ಜಗತ್ತಿನ ಶಕ್ತಿಶಾಲಿ ಪ್ರಧಾನಿಯಾಗಿದ್ದಾರೆ ಎಂದು ಚಿತ್ರನಟಿ ಮತ್ತು ಬಿಜೆಪಿ ಸ್ಟಾರ್ ಪ್ರಚಾರಕಿ ಶ್ರುತಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳ್ಳಿ ಪರ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಡಬಲ್ ಎಂಜಿನ್ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾನ್ಯ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡುವ ಪಕ್ಷ ಬಿಜೆಪಿ. ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರಿಗೂ ಗೌರವ ನೀಡಲಾಗುತ್ತದೆ. ಅಂಥ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಸಂಜೀವ ಐಹೊಳ್ಳಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಬಿಜೆಪಿಯ ಕಾರ್ಯಕರ್ತರ ಶಕ್ತಿ ತೋರಿಸಬೇಕು ಎಂದು ಹೇಳಿದರು.
ಚಹಾ ಮಾರುವ ಬಿಜೆಪಿಯ ಓರ್ವ ಸಾಮಾನ್ಯ ಬಿಜೆಪಿಯ ಕಾರ್ಯಕರ್ತ ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ಕಸ ಇದ್ದರೆ ರೈತರ ಜಮೀನು ನಾಶವಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಇದ್ದರೆ ದೇಶ ನಾಶವಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಎಸೆಯಬೇಕು. ಕೋಟ್ಯಂತರ ಹಿಂದುಗಳ ಸಾವಿರಾರು ವರ್ಷಗಳ ಕನಸಾದ ಭವ್ಯ ಮತ್ತು ದಿವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಮಂದಿರದ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೂರ್ಣವಾಗಲಿದೆ. ರಾಮನ ಪರಮ ಭಕ್ತ ಆಂಜನೇಯನನ್ನು ಕೆಣಕಿ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಮತದಾರರು ಮೇ 10 ರಂದು ಬಿಜೆಪಿ ಪಕ್ಷದ ಕಮಲದ ಗುರುತಿಗೆ ಬಟನ್ ಒತ್ತಿ ಜೈ ಭಜರಂಗಬಲಿ, ಜೈ ಶ್ರೀ ರಾಮ ಎಂದು ಹೇಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾಗಠಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳ್ಳಿ ಮಾತನಾಡಿ, ನನ್ನಂಥ ಸಾಮಾನ್ಯ ಕಾರ್ಯಕರ್ತನನ್ನು ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಪಕ್ಷದ ಹಿರಿಯರು ಗುರುತಿಸಿ ನನಗೆ ಪಕ್ಷದ ಟಿಕೆಟ್ ನೀಡಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡುವೆ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಈ ಬೃಹತ್ ರೋಡ್ ಶೋ ನಲ್ಲಿ ಜಿ. ಪಂ. ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಮಾಜಿ ಸದಸ್ಯ ಭೀಮು ಸಾಹುಕಾರ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ರಾಮ ಅವಟಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಪ. ಪಂ. ಬಿಜೆಪಿ ಮಾಜಿ ಸದಸ್ಯ ನಾಗರಾಜ ನಿರಾಳೆ, ವಿಜಯಕುಮಾರ ಅವಟಿ, ಶಿವಾನಂದ ಖಟ್ಟಿ, ಗ್ರಾ. ಪಂ. ಮಾಜಿ ಸದಸ್ಯ ರಾಜು ಕೋಳಿ, ಪ್ರಭಾಕರ ನಿರಾಳೆ, ಮಹಾದೇವ ಯಂಕಂಚಿ, ಎಂ. ಆರ್. ಹಿಟ್ನಳ್ಳಿ,ನ್ಯಾಯವಾದಿ ಅಶೋಕ ಕುಲಕರ್ಣಿ, ಪೀರಪ್ಪ ಅಗಸರ, ಸಂಗಾ ಟೇಲರ್, ನಾಗನಾಥಗೌಡ ಬಿರಾದಾರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು












Click it and Unblock the Notifications