DK Shivakumar On Amit Shah: ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ; ಅಮಿತ್ ಶಾಗೆ ಡಿ.ಕೆ. ಶಿವಕುಮಾರ್ ಟಾಂಗ್
ಬೆಂಗಳೂರು,ಏಪ್ರಿಲ್25: ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಲಿಂಗಾಯತ ಮುಖ್ಯಮಂತ್ರಿಗಳಿಗೆ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ವಿರುದ್ದ ಡಿ ಕೆ ಶಿವಕುಮಾರ್ ಟಾಂಗ್ ನೀಡಿದ್ದು, ಅಮಿತ್ ಶಾ ಅವರಿಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ. ನಾನು ವಿರೇಂದ್ರ ಪಾಟೀಲ್ ಅವರ ಸರ್ಕಾರದ ಭಾಗವಾಗಿದ್ದೆ. ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲ ಎಂದು ಹೇಳಿದ್ದಾರೆ

ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಯಾವ ಮಾತು ಆಡಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ಯಾವ ರೀತಿ ಬೆದರಿಕೆ ಹಾಕಲಾಗಿತ್ತು ಎಂಬ ವಿಷಯ ನನಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಕಣ್ಣೀರಿನ ಶಾಸ್ತಿ ಆಗಲಿದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರು ಕಣ್ಣೀರು ಹಾಕದಿರಬಹುದು. ಅವರ ಮನಸ್ಸು ಅತ್ತಿದೆ ಎಂದು ತಿಳಿಸಿದರು.
ಕಳೆದ ಮೂರು ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದು, ಪಕ್ಷದ ಪರವಾಗಿ ಪ್ರಚಾರದ ಜತೆಗೆ ದೇವರ ಸನ್ನಿಧಿಗೂ ಭೇಟಿ ನೀಡಿದ್ದೇನೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲೂ ಸಾವಿರಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಸಾವಿರಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಆ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆಗಳು ದಟ್ಟವಾಗಿವೆ. ಉಡುಪಿ ಮಂಗಳೂರು ಜಿಲ್ಲೆಯಗಳಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಾತಾವರಣವಿದೆ. ಸಮೀಕ್ಷೆಗಳ ವರದಿಗಳು ಗ್ಯಾರಂಟಿ ಆಗಲಿವೆ ಎಂಬ ನಂಬಿಕೆ ಇದೆ ಎಂದರು.
ನೀವು ಮುಸಲ್ಮಾನರಿಗೆ ಹೇಗೆ ಮೀಸಲಾತಿ ನೀಡುತ್ತೀರಿ ಎಂದು ಅಮಿತ್ ಶಾ ಕೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಒಕ್ಕಲಿಗರಾಗಲಿ, ಲಿಂಗಾಯತರಾಗಲಿ, ಬೇರೆಯವರ ಮೀಸಲಾತಿ ಕಿತ್ತು ನಮಗೆ ಶೇ.2ರಷ್ಟು ಮೀಸಲಾತಿ ನೀಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರೆ, ಮೀಸಲಾತಿ ಮಿತಿಯನ್ನು ವಿಸ್ತರಿಸಿ ಈ ಸಮುದಾಯಗಳಿಗೆ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂಬುದು ನಮ್ಮ ಒತ್ತಾಸೆ. ಮುಸಲ್ಮಾನರಿಗೂ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಮೀಸಲಾತಿ ಸಿಗಬೇಕು.

ಬೇರೆ ರಾಜ್ಯಗಳಲ್ಲೂ ಮೀಸಲಾತಿ ಮಿತಿಯನ್ನು ಮೀರಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರವಾಗಿ ಸರ್ಕಾರದ ಆದೇಶ ಜಾರಿ ಕಷ್ಟ ಎಂಬುದು ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ರಾಜ್ಯ ಹಾಗೂ ಹೊರ ದೇಶಗಳಲ್ಲಿರುವ ಮತದಾರರಿಗೆ ನಾನು ಈ ಮೂಲಕ ಮನವಿ ಮಾಡಿಕೊಳ್ಳಲು ಬಯಸುತ್ತೇನೆ. ನೀವು ದೂರದ ಊರಿನಲ್ಲಿದ್ದರೂ ನಿಮ್ಮ ಸೇವೆಯಿಂದ ನಮ್ಮ ರಾಜ್ಯಕ್ಕೆ ಹೆಸರು ಬಂದಿದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆ ಬರುತ್ತಿಲ್ಲ, ನಿರುದ್ಯೋಗ ಹೆಚ್ಚಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನೀವೆಲ್ಲರೂ ಭಾಗಿಯಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಿಂದ ಹೊರಗೆ ಇರುವವರಿಗಾಗಿ ನೆರವಾಗಲು, ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲಾಗುವುದು. ಇದನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದರು.












Click it and Unblock the Notifications