ಎಲ್ಲಾ ಕಾಲಕ್ಕೂ ಸಮೀಕ್ಷೆಗಳು ನಿಜವಾಗಿಲ್ಲ; ನಮ್ಮ 130 ರ ಲೆಕ್ಕಾಚಾರ ಸರಿ: ಡಾ.ಜಿ ಪರಮೇಶ್ವರ್
ತುಮಕೂರು, ಮೇ 11: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ರಾಷ್ಟ್ರೀಯ ಸುದ್ದಿವಾಹಿನಿಗಳು ಸಮೀಕ್ಷೆಗಳು ಹೊರಬಿದ್ದಿದ್ದು, ಕಾಂಗ್ರೆಸ್ ನಾಯಕರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮಾತನಾಡಿ, ಎಲ್ಲಾ ಕಾಲಕ್ಕೂ ಎಲ್ಲಾ ಸಮೀಕ್ಷೆಗಳು ನಿಜವಾಗಲ್ಲ. ಕೆಲವೊಮ್ಮೆ ನಿಜವಾಗಿದೆ, ಇನ್ನೂ ಕೆಲವೊಮ್ಮೆ ಸುಳ್ಳಾಗಿದೆ. ಆದರೂ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಪರ ಅಲೆ ಇರುವುದು ಸಾಬೀತಾಗಿದೆ.ಇನ್ನು ಏನಿದ್ದರೂ ಸಂಖ್ಯೆಯ ದೃಢೀಕರಣ ಅಷ್ಟೇ ಬಾಕಿ ಎಂದು ಹೇಳಿದರು.

ನಾವು 130 ಸ್ಥಾನ ಪಡೆಯುತ್ತೇವೆ. ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆ. ಸಿದ್ದರಾಮಯ್ಯ ಕೂಡ ವರುಣಾದಲ್ಲಿ ಯಾವುದೇ ತೊಂದರೆ ಇಲ್ಲದೇ ಗೆಲ್ಲುತ್ತಾರೆ. ನಾನು ಕೂಡ ಕೊರಟಗೆರೆಯಲ್ಲಿ ಹಿಂದಿಗಿಂತ ಹೆಚ್ಚಿನ ಬಹುಮತದಲ್ಲಿ ಗೆಲ್ಲುತ್ತೇನೆ. 2013ರಲ್ಲಿ ನಾನು 120 ಸೀಟ್ ಬರುವ ಮುನ್ಸೂಚನೆ ಕೊಟ್ಟಿದ್ದೆ. ಆದರೆ 122 ಸ್ಥಾನ ಬಂದಿತ್ತು. ಈಗ ನಾನು 130 ಸ್ಥಾನ ಎಂದು ಹೇಳಿದ್ದೇನೆ. ನನ್ನ ಲೆಕ್ಕಾಚಾರ ಸರಿ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಮುಖ್ಯಮಂತ್ರಿ ಆಯ್ಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಆಯ್ಕೆಯು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಸಿಎಲ್‍ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರು ಒಳ್ಳೆ ಆಡಳಿತ ಕೊಡುತ್ತಾರೋ ಅಂತವರನ್ನು ಹೈಕಮಾಂಡ್ ಸಿಎಂ ಮಾಡಬಹುದು. ಹೈಕಮಾಂಡ್ ನನಗೆ ಸಿಎಂ ಕೊಡುತ್ತೇನೆ ಅಂದರೆ ಬೇಡ ಅನ್ನುತ್ತೇನಾ, ನಾನು ಸಿಎಂ ಆಗಬೇಕು ಎಂದು ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ ಇದೆ ಎಂದ ತಕ್ಷಣ ಅದು ಸಾಧ್ಯ ಆಗೋದಿಲ್ಲ ಎಂದರು












Click it and Unblock the Notifications