ಡಿಕೆಶಿಯನ್ನು ಹಾಡಿ ಹೊಗಳಿದ ಬೊಮ್ಮಾಯಿ: ಮತ್ತೆ ಮುನ್ನೆಲೆಗೆ ಬಂದ ಹೊಂದಾಣಿಕೆ ರಾಜಕಾರಣದ ಚರ್ಚೆ
ಬೆಂಗಳೂರು, ಜುಲೈ 11: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮಗೆ ಸಿಕ್ಕಿರುವ ಎಲ್ಲಾ ಕುದುರೆಗಳನ್ನು ಯಶಸ್ವಿಯಾಗಿ ಏರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದಾರೆ. ನೂತನ ಉಪಸಭಾಪತಿ ಆಯ್ಕೆ ಬಳಿಕ ಮಾತನಾಡಿದ ಬೊಮ್ಮಾಯಿ, ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
'ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ಧೀರನೂ ಅಲ್ಲವೆಂದು ಹೇಳಲಾಗುತ್ತದೆ. ಆದರೆ, ಡಿಕೆ ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲ ಯಶಸ್ವಿಯಾಗಿಯೇ ಏರಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಹೇಳಿದ್ದಾರೆ.

ಶಿವಕುಮಾರ್ ಅವರಿಗೆ ಇನ್ನು ಮುಂದೆ ಯಾವ ಕುದುರೆ ಸಿಗುತ್ತದೆ ಎಂದು ಕಾದು ನೋಡೋಣ. ಮೊದಲು ಅವರು ಪವರ್ ಮಿನಿಸ್ಟರ್ ಆದರು. ಪವರ್ ಖಾತೆ ಜೊತೆಗೆ ಪವರ್ ಪೊಲಿಟಿಕ್ಸ್ ಅನ್ನೂ ಮಾಡಿದರು ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು. ನಮಗೆ ಯಾರೂ ಪವರ್ ಅನ್ನು ಕೊಡಲ್ಲ. ನಾವು ಅದನ್ನು ಕಿತ್ತುಕೊಳ್ಳಬೇಕು. ಅದನ್ನು ಡಿಕೆಶಿ ಚೆನ್ನಾಗಿ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಮತ್ತೆ ಮುನ್ನೆಲೆಗೆ ಬಂದ ಹೊಂದಾಣಿಕೆ ರಾಜಕೀಯದ ಚರ್ಚೆ
ಕರ್ನಾಟಕ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತುಕೊಂಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಪಕ್ಷದ ದೊಡ್ಡ ನಾಯಕರು ಹೊಂದಾಣಿಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಹೊಂದಾಣಿಕೆ ರಾಜಕಾರಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಬೊಮ್ಮಾಯಿ ಮನೆಗೆ ತೆರಳಿದ್ದ ಡಿಕೆಶಿ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ತೆರಳಿ ಶುಭಾಶಯ ಕೋರಿದ್ದರು. ಆ ನಂತರ ಅವರು ಮಾತುಕತೆ ನಡೆಸಿದ್ದರು. ಡಿಕೆಶಿ ಅವರು ಬೊಮ್ಮಾಯಿ ಜೊತೆ ಸೌಜನ್ಯದಿಂದ ಇರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದು ಹೊಂದಾಣಿಕೆ ರಾಜಕೀಯವಲ್ಲದೇ ಮತ್ತೇನು ಎಂಬ ಪ್ರಶ್ನೆಗಳು ಹರಿದಾಡಿದ್ದವು.
ಬೊಮ್ಮಾಯಿ ವಿರುದ್ಧ ಯತ್ನಾಳ್ ವಾಗ್ದಾಳಿ
ಬೊಮ್ಮಾಯಿ ಡಿಕೆಶಿ ಭೇಟಿ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆಯಲ್ಲಿ ವಾಗ್ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಬೊಮ್ಮಾಯಿ ವೇದಿಕೆ ಮೇಲೆಯೇ ಉಪಸ್ಥಿತರಿದ್ದರು.
'ಡಿಕೆಶಿ ಬೊಮ್ಮಾಯಿ ಅವರ ಮನೆಗೆ ಬರುತ್ತಾರೆ. ನಾನು ಬಿಜೆಪಿ ನಾಯಕರೊಂದಿಗೆ ಅನ್ಯೋನ್ಯವಾಗಿದ್ದೇನೆಂದು ಸೋನಿಯಾ ಗಾಂಧಿ ಅವರಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುವುದು ಡಿಕೆಶಿ ಅವರ ಪ್ಲ್ಯಾನ್ ಆಗಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದ್ದರು.
ಸಮಜಾಯಿಷಿ ನೀಡಿದ್ದ ಬೊಮ್ಮಾಯಿ
ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಮನೆಗೆ ಬರುವವರನ್ನು ಬೇಡ ಎನ್ನಲಿಕ್ಕೆ ಆಗುತ್ತದೆಯೇ? ನಾವು ಯಾರೊಂದಿಗೆ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಇದ್ದರೆ ಒದಗಿಸಿ ಎಂದು ಬೊಮ್ಮಾಯಿ ಹೇಳಿದ್ದರು.
ಈಗ ಮತ್ತೆ ಬೊಮ್ಮಾಯಿ ಅವರು ಡಿಕೆಶಿ ಅವರನ್ನು ಹೊಗಳಿರುವುದು ಹಲವು ಚರ್ಚೆಯನ್ನು ಹುಟ್ಟುಹಾಕಿದೆ. ಒಟ್ಟಿನಲ್ಲಿ, ತಣ್ಣಗಾಗಿದ್ದ ಹೊಂದಾಣಿಕೆ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಪದೇಪದೇ ಬಿಜೆಪಿಯನ್ನು ಮುಜಗರಕ್ಕೆ ಈಡು ಮಾಡುತ್ತಲೇ ಇದೆ.












Click it and Unblock the Notifications