ಕರ್ನಾಟಕ ವರ್ಷದ ವ್ಯಕ್ತಿ 2013 : ನಿಮ್ಮ ಆಯ್ಕೆ?
ಸಮಾಜಕ್ಕೆ ಒಳ್ಳೆಯದನ್ನೇ ಮಾಡಿಕೊಂಡು ಬರುವ, ತಾನು ಹುಟ್ಟಿ ಬೆಳೆದ ದೇಶಕ್ಕೆ ಗೌರವವನ್ನು ತಂದು ಕೊಡುವ, ಹತ್ತು ಹಲವಾರು ಜನರಿಗೆ ದಾರಿ ದೀಪವಾಗುವ ಮಹೋನ್ನತ ವ್ಯಕ್ತಿಗಳು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ.
ತಮ್ಮ ತಮ್ಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಸಲ್ಲಿಸುವ ಮೂಲಕ ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಆದರ್ಶಪ್ರಾಯರಾಗಿರುವ ನಮ್ಮ ರಾಜ್ಯದ ಗಣನೀಯರನ್ನು ಪಟ್ಟಿ ಮಾಡಿ, (ಬೆಸ್ಟ್ ಔಟ್ ಆಫ್ ಬೆಸ್ಟ್) ಅದರಲ್ಲಿ 'ಕರ್ನಾಟಕ ವರ್ಷದ ವ್ಯಕ್ತಿ 2013' ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವ ಜವಾಬ್ದಾರಿಯನ್ನು ನಮ್ಮ ಓದುಗರ ಮಡಿಲಿಗೇ ಹಾಕುತ್ತಿದ್ದೇವೆ.
ನಾವು ಪಟ್ಟಿ ಮಾಡಿದ ಹೆಸರಿನ ಹೊರತಾಗಿ ಬೇರೆ ಆಯ್ಕೆ ನಿಮ್ಮದಾಗಿರಲೂ ಬಹುದು. ಅದನ್ನು ಈ ಲೇಖನದ ಕಾಮೆಂಟ್ ಬಾಕ್ಸಿನ ಮೂಲಕ, ಇಮೇಲ್ ಮೂಲಕ ([email protected]), ಫೇಸ್ ಬುಕ್ನಲ್ಲಿ ನಮ್ಮ ಟೈಮ್ ಲೈನ್ ಮೂಲಕ (https://www.facebook.com/oneindiakannada) ನಮಗೆ ತಿಳಿಸಲು ಈ ಮೂಲಕ ಕೋರುತ್ತಿದ್ದೇವೆ. ನಿಮ್ಮ ಆಯ್ಕೆಯ ಹಿಂದೆ ನೀವು ನೀಡುವ ಸ್ಪಷ್ಟನೆಯನ್ನು ಬರೆಯಲು ಮರೆಯದಿರಿ.
ಓದುಗರ ಒಟ್ಟಾರೆ ಅಭಿಪ್ರಾಯವನ್ನು ಕ್ರೋಢೀಕರಿಸಿ ಬದಲಾವಣೆ ಇದ್ದಲ್ಲಿ ಪಟ್ಟಿಯನ್ನು ಮತ್ತೆ ಮಾರ್ಪಾಡು ಮಾಡಲಾಗುವುದು. ಒನ್ ಇಂಡಿಯಾ ಕನ್ನಡ ಓದುಗರು ಇಮೇಲ್, ಕಾಮೆಂಟ್, ಸಾಮಾಜಿಕ ತಾಣದ ಮೂಲಕ 'ಕರ್ನಾಟಕ ವರ್ಷದ ವ್ಯಕ್ತಿ 2013' ಯಾರನ್ನು ಆಯ್ಕೆ ಮಾಡಿದ್ದಾರೆಂದು ಡಿಸೆಂಬರ್ 31, 2013 ರಂದು ಪ್ರಕಟಿಸಲಾಗುವುದು. (2013ರಲ್ಲಿ ಹೆಚ್ಚು ವಿವಾದ ಸೃಷ್ಟಿಸಿದ ವ್ಯಕ್ತಿ ಯಾರು)
ನೀವೂ ವೋಟ್ ಮಾಡಿ, ನಿಮ್ಮವರಿಗೂ ವೋಟ್ ಮಾಡಲು ಹೇಳಿ..

ಡಾ. ಸಿ ಎನ್ ಆರ್ ರಾವ್
ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್ ವಿಶ್ವಪ್ರಸಿದ್ದ ಭಾರತೀಯ ವಿಜ್ಞಾನಿಗಳಲೊಬ್ಬರು. ಪ್ರಸಕ್ತ ಜವಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ನಲ್ಲಿ ಗೌರವಾಧ್ಯಕ್ಷರಾಗಿರುವ ರಾವ್ ಅವರು ನ್ಯಾನೋ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತರತ್ನ' ಪ್ರಶಸ್ತಿಯನ್ನು ಕೇಂದ್ರ ಸರಕಾರ ಇವರಿಗೆ ಘೋಷಿಸಿತ್ತು. 45ಕ್ಕೂ ಹೆಚ್ಚು ವೈಜ್ಞಾನಿಕ ಪುಸ್ತಕಗಳನ್ನು ಮತ್ತು 150ಕ್ಕೂ ಹೆಚ್ಚು ಸಂಶೋಧನಾ ಲೇಖನವನ್ನು ರಾವ್ ಬರೆದಿದ್ದಾರೆ.

ಸಿದ್ದರಾಮಯ್ಯ
ಬಿಜೆಪಿ ವಿರುದ್ದ ಸಟೆದು ನಿಂತು ಒಂಬತ್ತು ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಆದ ನಂತರವೂ ಪಕ್ಷದೊಳಗೆ ಮತ್ತು ಹೊರಗೆ ತನ್ನ ವಿರುದ್ದ ಇರುವ ಅಸಮಾಧಾನದ ಹೊಗೆಯನ್ನು ನಿಭಾಯಿಸುತ್ತಾ ಸರಕಾರವನ್ನು ಮುನ್ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾ ಅನ್ನಭಾಗ್ಯದಂತಹ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದರು.

ವೈಜನಾಥ್ ಪಾಟೀಲ್
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಬೇಕೆಂದು ನಿರಂತರವಾಗಿ ಹೋರಾಟ ಮಾಡಿದ ಹಿರಿಯ ಮುಖಂಡ. ಹೈದರಾಬಾದ್ - ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ಪಾಟೀಲ್, ಸಂವಿಧಾನದ 371ನೇ ವಿಧಿಗೆ ಸಂಸತ್ ಅಧಿವೇಶನದಲ್ಲಿ ತಿದ್ದುಪಡಿ ಮಾಡಬೇಕೆಂದು ಹೋರಾಟ ನಡೆಸಿ ಅದರಲ್ಲಿ ಯಶಸ್ಸನ್ನು ಪಡೆದವರು. ಈ ಭಾಗದ ಜನರ ದಶಕಗಳ ಕನಸಿಗೆ ವೈಜನಾಥ ಪಾಟೀಲ್ ಧ್ವನಿಯಾದರು.

ಡಾ. ಯು ಆರ್ ರಾವ್
ಉಡುಪಿ ರಾಮಚಂದ್ರ ರಾವ್ ಟೆಕ್ಸಾಸ್ ನಲ್ಲಿ ಸಂಶೋಧಕರಾಗಿ ಮತ್ತು ಉಪನ್ಯಾಸಕರಾಗಿ ದುಡಿದು ಭಾರತಕ್ಕೆ ವಾಪಸಾದ ಯು ಆರ್ ರಾವ್ ಇಸ್ರೋದಲ್ಲಿ ಸೇವೆಗೈಯುತ್ತಿದ್ದಾರೆ. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನೇರಿಸಿದ ಕೀರ್ತಿ ರಾವ್ ಅವರದ್ದು. ವಿಶ್ವಕಿರಣಗಳ ಬಗ್ಗೆ ಅಧ್ಯಯನ ಮಾಡಿ ಯು ಆರ್ ರಾವ್ ಪ್ರಾಧ್ಯಾಪಕರಾಗಿಯೂ ದುಡಿದಿದ್ದಾರೆ. ಇಸ್ರೋ ಮೂಲಕ ದೇಶದ ಹೆಸರನ್ನು ವಿಶ್ವದಲ್ಲಿ ಪಸರಿಸಿದ ಕೀರ್ತಿ ರಾವ್ ಅವರಿಗೆ ಸಲ್ಲುತ್ತದೆ.

ಬಿ ಎಸ್ ಯಡಿಯೂರಪ್ಪ
ಹುಟ್ಟು ಹೋರಾಟಗಾರ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿದ ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ನಾಡಿನೆಲ್ಲಡೆ ಸಂಚರಿಸಿ ಅಸೆಂಬ್ಲಿ ಚುನಾವಣೆಯಲ್ಲಿ ಕೆಜೆಪಿ ಮೂಲಕ ಆಖಾಡಕ್ಕೆ ಇಳಿದಿದ್ದರು. ಕೆಜೆಪಿಗೆ ಗಣನೀಯವಾಗಿ ಸೀಟ್ ಗೆಲ್ಲಿಸುವಲ್ಲಿ ವಿಫಲರಾದರೂ ತನ್ನ ಮಾತೃ ಪಕ್ಷ ಬಿಜೆಪಿಯ ವೋಟ್ divide ಮಾಡವಲ್ಲಿ ಯಶಸ್ವಿಯಾದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಇವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಹರಸಾಹಸ ಮಾಡುತ್ತಿದ್ದಾರೆ. ಆದರೂ ತನ್ನ ಗುಟ್ಟನ್ನು ಬಿಟ್ಟು ಕೊಡದ ಯಡಿಯೂರಪ್ಪನವರ ನಿರ್ಧಾರ ಏನು ಎನ್ನುವುದು ಬಿಜೆಪಿಯ ನಾಯಕರಿಗೆ ಇನ್ನೂ ತಿಳಿಯುತ್ತಿಲ್ಲ.

ಜ್ಯೋತಿ ಉದಯ್
ಕಾರ್ಪೋರೇಶನ್ ಬ್ಯಾಂಕಿನ ಉದ್ಯೋಗಿ. ಎಟಿಎಂ ನಲ್ಲಿ ಇವರ ಮೇಲೆ ಹಲ್ಲೆ ನಡೆದ ಪ್ರಕರಣ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಗಿತ್ತು. ದೇಶದ ಎಟಿಎಂನಲ್ಲಿನ ಭದ್ರತೆ ಮತ್ತು ಸುರಕ್ಷತೆಗೆ ಜ್ಯೋತಿ ಉದಯ್ ಮೇಲೆ ನಡೆದ ಹಲ್ಲೆ ಘಟನೆ ಹೊಸ ಸ್ವರೂಪವನ್ನೇ ನೀಡಿತು. ಈ ಘಟನೆಯ ನಂತರ ಮಹಿಳಾ ಸುರಕ್ಷತೆಯ ಬಗ್ಗೆ ಹೊಸ ಚಿಂತನೆ ಮತ್ತು ಕ್ರಮ ತೆಗೆದು ಕೊಳ್ಳಬೇಕಾದ ಕುರಿತು ಸರಕಾರ ಚಿಂತನೆ ನಡೆಸಲಾರಂಭಿಸಿತು.

ಡಾ.ಚಂದ್ರಶೇಖರ ಕಂಬಾರ
ಡಾ.ಚಂದ್ರಶೇಖರ ಕಂಬಾರ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಕವಿ ಮತ್ತು ನಾಟಕಕಾರರಾಗಿ ಜನಪ್ರಿಯರಾಗಿರುವ ಕಂಬಾರ, ವಿದೇಶದಲ್ಲೂ ಜಾನಪದ ಮತ್ತು ರಂಗಭೂಮಿ ಕುರಿತು ಉಪನ್ಯಾಸ ನೀಡಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿಯೂ ದುಡಿದಿರುವ ಕಂಬಾರರಿಗೆ 2010ರ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಸಿರಿಸಂಪಿಗೆ, ಬೆಳ್ಳಿಮೀನು, ಕಾಡುಕುದುರೆ, ಬೋಳೇಶಂಕರ, ಸಿಂಗಾರವ್ವ ಇವರ ಪ್ರಮುಖ ಕೃತಿಗಳು.

ಎಸ್ ಆರ್ ಹಿರೇಮಠ
ಅಕ್ರಮ ಗಣಿಗಾರಿಕೆ ಮತ್ತು ಭೂಮಾಫಿಯಾದಲ್ಲಿ ತೊಡಗಿರುವವರ ಪಾಲಿಗೆ ಸಿಂಹಸ್ವಪ್ನವಾಗಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ. ಸಿದ್ದರಾಮಯ್ಯ ಸಂಪುಟದಲ್ಲಿ ಕಳಂಕಿತರಾಗಿ ಸಚಿವ ಸ್ಥಾನ ನೀಡಬಾರದೆಂದು ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಡಿಕೆಶಿ, ರಮೇಶ್ ಕುಮಾರ್, ಅನಿಲ್ ಲಾಡ್ ಮುಂತಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಾರದೆಂದು ಹೋರಾಟ ನಡೆಸಿದುವರು. ವಾರ್ತಾ ಮಂತ್ರಿ ಯಾಗಿದ್ದ ಸಂತೋಷ್ ಲಾಡ್ ಹಿರೇಮಠ ಅವರ ಹೋರಾಟದ ಬಿಸಿಗೆ ಸಚಿವ ಸ್ಥಾನ ತೊರಯ ಬೇಕಾಗಿ ಬಂತು.

ಕೇಮಾರು ಶ್ರೀಗಳು
ಬಡವರ ಮತ್ತು ದೀನದಲಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದವರಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಕೂಡಾ ಪ್ರಮುಖರು. ಕೊಡಚಾದ್ರಿ, ನಾಗಾರ್ಜುನ ಸ್ಥಾವರದ ವಿರುದ್ದದ ಹೋರಾಟ ಮಾಡಿದ್ದ ಶ್ರೀಗಳು ಪ್ರಸಕ್ತ, ದಕ್ಷಿಣಕನ್ನಡ ಜಿಲ್ಲೆಯ ಉಜಿರೆ SDM ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ವಿರುದ್ದ ಪ್ರಮುಖವಾಗಿ ಹೋರಾಟದಲ್ಲಿ ತೊಡಗಿದ್ದಾರೆ.

ರಮ್ಯಾ
ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮಂಡ್ಯ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ನಟನಾ ವೃತ್ತಿಯಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ರಮ್ಯಾ, ಸಂಸದೆಯಾಗಿ ಆಯ್ಕೆಯಾದ ನಂತರ ಜನರಿಗೆ ಹೆಚ್ಚು ಹತ್ತಿರವಾಗಿ ಹೆಸರು ಗಳಿಸುತ್ತಿದ್ದಾರೆ. ಕ್ಷೇತ್ರಕ್ಕೆ ಪ್ರಕಟವಾದ ಅನುದಾನಗಳನ್ನು ಜನರಿಗೆ ತಲುಪುವಂತೆ ಮಾಡುವಲ್ಲಿ ನಿರತರಾಗಿರುವ ರಮ್ಯಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ ಜನ ಮೆಚ್ಚುಗೆ ಗಳಿಸುತ್ತಿದ್ದಾರೆ.

ಕರ್ನಾಟಕ ವರ್ಷದ ವ್ಯಕ್ತಿ ಯಾರು? ಮತ ಹಾಕಿ
ಈ ಕೊಂಡಿಸಿ ಕ್ಲಿಕ್ಕಿಸಿ ನಿಮ್ಮ ಇಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಿರಿ












Click it and Unblock the Notifications