ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸಲ್ಲ, ನಕಲಿ - ಡಬಲ್ ಬಿಲ್ ಮಾಡಿದ್ರೆ ಹುಷಾರ್ ಎಂದ ಸಿಎಂ ಡಿ.ಕೆ ಶಿವಕುಮಾರ್
ಕರ್ನಾಟಕದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಭ್ರಷ್ಟಾಚಾರ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ನಕಲಿ ಬಿಲ್ ಹಾಗೂ ಡಬಲ್ ಬಿಲ್ ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಾಖಲೆಗಳನ್ನು ತಿದ್ದುವುದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಆಸ್ತಿಗಳ ದಾಖಲೆಗಳನ್ನು ಡಿಜೀಟಲೀಕರಣ ಮಾಡಲಾಗುತ್ತಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅಧಿವೇಶನ ಮುಗಿದ ಮೇಲೆ ಪ್ರತಿ ತಾಲ್ಲೂಕುಗಳಿಗೂ ಭೇಟಿ ನೀಡುವುದಾಗಿಯೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಪ್ರತಿಯೊಬ್ಬ ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸವಿದ್ದು ಕಾರ್ಯನಿರ್ವಹಿಸಬೇಕು. 'ಪ್ರಜಾಸೇವೆ' ಇಲಾಖೆ ಮೂಲಕ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ತಿಂಗಳ 1ನೇ ಮತ್ತು 3ನೇ ಶನಿವಾರ ತಾಲ್ಲೂಕು ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ನಂತರ ಇದನ್ನು ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲೂ ಜಾರಿಗೆ ತರಬೇಕು. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಿ, ಬೇರೆಡೆಗೆ ಸ್ಥಳಾಂತರಿಸದೆ 'Sharing and caring' ಮಂತ್ರವನ್ನು ಅನುಸರಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಒಂದು ತಿಂಗಳಲ್ಲಿ ಅಲೆಮಾರಿ, ಆದಿವಾಸಿ ಆಯೋಗ ರಚನೆ
ಇನ್ನು ಮುಂದಿನ ಒಂದು ತಿಂಗಳಲ್ಲಿ ಅಲೆಮಾರಿ, ಆದಿವಾಸಿ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ (ರಿ) ಮತ್ತು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ (ರಿ) ವತಿಯಿಂದ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಡಿನಲ್ಲಿರುವ ಆದಿವಾಸಿ ಜನರ ಬದುಕು ಬದಲಾಯಿಸಲು ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಉಳುವವನಿಗೆ ಭೂಮಿ ಕೊಡುವ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಪ್ರಕೃತಿಯ ಮೇಲೆ ಪ್ರೀತಿಯನ್ನಿಟ್ಟುಕೊಂಡು ಬದುಕುತ್ತಿರುವ ನಿಮ್ಮ ಬದುಕು ಶ್ರೇಷ್ಠವಾದದ್ದು.
ಆದಿವಾಸಿಗಳೆಲ್ಲರೂ ವಿದ್ಯಾವಂತರಾಗಬೇಕು. ಆದರೆ ಮೂಲ ಕಸುಬಿನಿಂದ ದೂರ ಹೋಗಬಾರದು. ನಿಮ್ಮ ಮೂಲ ಸಿದ್ಧಾಂತವನ್ನು ಕಾಪಾಡಿಕೊಂಡು ಹೋಗಿ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ.
ಕಂದಾಯ ಗ್ರಾಮಗಳಲ್ಲಿ ಈಗಾಗಲೇ ವಾಸದ ಹಕ್ಕುಪತ್ರ ಕೊಟ್ಟಿದ್ದೇವೆ. ಕೆಲವರಿಗೆ ಮನೆ ಹಾಗೂ ಜಮೀನುಗಳನ್ನು ಕೊಟ್ಟಿದ್ದೇವೆ. ಅಲೆಮಾರಿ ಹಾಗೂ ಆದಿವಾಸಿ ಜನರ ಆಯೋಗ ರಚಿಸುವಂತೆ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಮನವಿ ಮಾಡಿದ್ದಾರೆ. ಒಂದು ತಿಂಗಳಲ್ಲೇ ಆಯೋಗ ರಚನೆ ಮಾಡುತ್ತೇವೆ. ನೊಂದವರಿಗೆ ಶಕ್ತಿ ತುಂಬುವುದೇ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಚಿವ ಅಜಯ್ ಸಿಂಗ್, ನಟ ಪ್ರಕಾಶ್ ರಾಜ್ ಹಾಗೂ ಹಿರಿಯ ಸಾಮಾಜಿಕ ನ್ಯಾಯ ಹೋರಾಟಗಾರರಾದ ಡಾ. ಸಿ. ಎಸ್. ದ್ವಾರಕಾನಾಥ್ ಅವರು ಸೇರಿದಂತೆ ಹಲವರು ಇದ್ದರು.


Click it and Unblock the Notifications
